ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಗೆಲುವು ಸಾಧಿಸಬೇಕಾಗಿರುವುದು ಕಾಲದ ಅನಿವಾರ್ಯತೆಯಾಗಿದೆ. ಈ ಬಾರಿ ಪದ್ಮರಾಜ್ ಗೆಲುವು ನಿಶ್ಚಿತ ಎಂದು ರಾಷ್ಟ್ರ ರಕ್ಷಾ ವೇದಿಕೆಯ ಅಧ್ಯಕ್ಷ ಲಕ್ಷ್ಮೀಶ ಗಬ್ಬಲಡ್ಕ ಹೇಳಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ದೇಶದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ, ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಪ್ರತಿಫಲಿಸಲಿದೆ ಎಂದರು. ವಿಚಾರಗಳೇ ಇಲ್ಲದೆ ಈ ಬಾರಿ ಬಿಜೆಪಿ ನೀರಸ ಚುನಾವಣೆಯನ್ನು ಎದುರಿಸುತ್ತಿದೆ , 10 ವರ್ಷಗಳ ಹಿಂದೆ ಮೋದಿ ಮುಖ ತೋರಿಸಿದರು. ಬಳಿಕ ಅಚ್ಛೆ ದಿನ್ ಎಂದರು ಆದರೆ ಈಗ ದೇಶಕ್ಕೆ ಯಾವುದೇ ವ್ಯಕ್ತಿ ಅನಿವಾರ್ಯ ಮತ್ತು ಪರಿಹಾರ ಅಲ್ಲಾ ಎಂದು ಹೇಳಿದರು.
ರಾಷ್ಟ ರಕ್ಷಾ ವೇದಿಕೆಯ ಗೌರವ ಸದಸ್ಯರಾದ ಕೆ.ಪಿ.ಜಾನಿ ಕಲ್ಲುಗುಂಡಿ ಮಾತನಾಡಿ ದೇಶದ ಭವಿಷ್ಯ ನಿರ್ಣಯಿಸುವ ನಿರ್ಣಾಯಕ ಚುನಾವಣೆ ನಮ್ಮ ಮುಂದೆ ಎದುರಾಗಿದೆ. ಆದುದರಿಂದ ಅತ್ಯಂತ ಜಾಗೃತರಾಗಿ ಮತದಾನ ಮಾಡಬೇಕಾಗಿದೆ.
ಕಳೆದ 10 ವರ್ಷಗಳಲ್ಲಿ ಎನ್‌ಡಿಎ ಸರಕಾರದ ಮಾರ್ಕ್ ಕಾರ್ಡ್ ನೋಡಿಕೊಂಡು, ದೇಶದ ಹಿತ ದೃಷ್ಠಿಯನ್ನು ಮುಂದಿರಿಸಿ ಮತ ಹಾಕಬೇಕಾಗಿದೆ ಎಂದು ಹೇಳಿದರು. ರಾಜ್ಯ ಸರಕಾರ ನೀಡುವ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಹೀಯಾಳಿಸುವುದು ಸರಿಯಲ್ಲ. ಗ್ಯಾರಂಟಿ ಯೋಜನೆಗಳು ಜನರ ಹಕ್ಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರ ರಕ್ಷಾ ವೇದಿಕೆಯ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಕೋಶಾಧಿಕಾರಿ ಅಶ್ರಪ್ ಎಲಿಮಲೆ, ಉಪಾಧ್ಯಕ್ಷ ಅಚ್ಚುತ ಮಲ್ಕಜೆ, ಗೌರವ ಸದಸ್ಯ ಕರುಣಾಕರ ಪಲ್ಲತ್ತಡ್ಕ ಉಪಸ್ಥಿತರಿದ್ದರು.