Ad Widget

ಸುಳ್ಯದ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ ವೆಂಟೆಡ್ ಡ್ಯಾಂ – ಫಲ ನೀಡಿದ ಮಾಜಿ ಸಚಿವ ಎಸ್ ಅಂಗಾರರ ದೂರದೃಷ್ಟಿಯ ಯೋಜನೆ

ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಪಯಸ್ವಿನಿ ನದಿ ಬತ್ತಿಹೋಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿತ್ತು. ಸುಳ್ಯ ನಗರದ ಜನತೆ ಕುಡಿಯುವ ನೀರಿನ ಕೊರತೆಯಿಂದ ಅನುಭವಿಸುತ್ತಿದ್ದ ಸಂಕಷ್ಟ ಈ ಬಾರಿ ವೆಂಟೆಡ್ ಡ್ಯಾಂ ನಿರ್ಮಾಣದಿಂದ ನಿಟ್ಟುಸಿರು ಬಿಡುವಂತಾಗಿದೆ. ಮಾಜಿ ಸಚಿವ ಎಸ್.ಅಂಗಾರರ ಮುತುವರ್ಜಿಯಿಂದ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 17 ಕೋಟಿ ರೂ ವೆಚ್ಚದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಾಣಗೊಂಡಿದ್ದರಿಂದ ಸಾಕಷ್ಟು ನೀರಿನ ಸಂಗ್ರಹವಿದ್ದು ಕೊರತೆ ನೀಗಿಸಿದೆ.‌

. . . . .

ಸುಳ್ಯ ನಗರದಾದ್ಯಂತ ಮಾರ್ಚ್ ಎಪ್ರಿಲ್ ತಿಂಗಳುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರಂತರ ಕಾಡುತ್ತಿತ್ತು. ಹೊಟೇಲ್ ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿ ಕೆಲವರು ಹೋಟೆಲ್ ಬಂದ್ ಮಾಡಿದರೇ ಕೆಲವರು ಬೇರೆ ಕಡೆಗಳಿಂದ ವಾಹನಗಳಲ್ಲಿ ನೀರನ್ನು‌ ತರುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ನೀರಿನ ಕೊರತೆಯಿಂದ ನಗರ ಪಂಚಾಯತ್ ಕೂಡ 2-3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವ ಸ್ಥಿತಿ ನಿರ್ಮಾಣವಾದ ಸಂದರ್ಭಗಳೂ ಇವೆ.‌ ವೆಂಟೆಡ್ ಡ್ಯಾಮ್ ನಿರ್ಮಾಣವಾಗದೇ ಇದ್ದಿದ್ದರೇ ಈ ಬಾರಿಯ ಬಿರುಬಿಸಿಲಿಗೆ ನೀರಿನ ಕೊರತೆಯುಂಟಾಗಿ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ವಿನಯಕುಮಾರ್ ಕಂದಡ್ಕ ಅವರು ನಗರ ಪಂಚಾಯತ್ ಅಧ್ಯಕ್ಷರಾಗಿದ್ದ ವೇಳೆ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾಗಿದ್ದ ಎಸ್.ಅಂಗಾರ ಅವರ ಸತತ ಪ್ರಯತ್ನದಿಂದ ವೆಂಟೆಡ್ ಡ್ಯಾಂ ನಿರ್ಮಾಗೊಂಡಿತ್ತು. ಆ ಮೂಲಕ ಸುಳ್ಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ತಂದದ್ದು ಅಂಗಾರರ ಹೆಸರನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ.

ನಗರ ಬೆಳೆಯುವ ದೃಷ್ಟಿಯನ್ನಿಟ್ಟು ಡ್ಯಾಂ ನಿರ್ಮಿಸಲಾಗಿದೆ : ಮಾಜಿ ಸಚಿವ ಎಸ್. ಅಂಗಾರ

ಸುಳ್ಯ ನಗರ ಪುರಸಭೆಯಾಗಿ ಪರಿವರ್ತನೆ ಆಗುವ ವೇಳೆಗೆ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವುದನ್ನು ಮನಗಂಡು ಶಾಶ್ವತ ವ್ಯವಸ್ಥೆಯ ಉದ್ದೇಶವಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಈ ಡ್ಯಾಂ ಅನ್ನು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ರೋಪ್ ಬಳಸಿ ಗೇಟು ತೆರೆಯುವ ವ್ಯವಸ್ಥೆ ಇದೆ. ಇದೇ ತರ ಕಾಂತಮಂಗಲ ಹಾಗೂ ಓಡಬಾಯಿ ಬಳಿ ಡ್ಯಾಂ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಇಂತಹ ಯೋಜನೆಗಳನ್ನು ಮುಂದುವರೆಸಿದರೆ ಅಂತರ್ಜಲ ಹೆಚ್ಚುವುದರಿಂದ ನದಿ ಪಾತ್ರದ ಜನರಿಗೂ ಪ್ರಯೋಜನ ವಾಗಲಿದೆ. ಅಲ್ಲದೆ ಸುಳ್ಯದಲ್ಲಿ ಇದೀಗ 60 ಕೋಟಿ ರೂಪಾಯಿಗಳಲ್ಲಿ ನಡೆಯುವ ಕುಡಿಯುವ ಯೋಜನೆಯನ್ನು ಕೂಡ ತಂದಿದ್ದು ಅದರ ಕಾಮಗಾರಿ ಕೂಡ ನಡೆಯುತ್ತಿದೆ ಅಲ್ಲದೆ ಸುಳ್ಯ ವಿಧಾನಸಭಾ ಕ್ಷೇತ್ರದ ಹಲವು ಕಡೆ ವೆಂಟೆಡ್ ಡ್ಯಾಂ ನಿರ್ಮಿಸಲಾಗಿದ್ದು ಶಾಂತಿಮುಗೇರು, ಮರಕತ, ಕಲ್ಮಕಾರು, ಮರ್ಕಂಜ, ತೋಟಚಾವಡಿ , ಕುಂಟಿಕಾನ, ನೆಲ್ಲಿಕುಂಜ ಬಳಿ ಸೇರಿದಂತೆ ಇತರೆ ಕಡೆಗಳಲ್ಲಿ ನಿರ್ಮಿಸಲಾಗಿದೆ ಎಂದು ಸಚಿವ ಎಸ್.ಅಂಗಾರ ಹೇಳಿದರು.

ನಗರಕ್ಕೆ ಕುಡಿಯುವ ನೀರು ಹಾಗೂ ನದಿ ಪಾತ್ರದ ಕೃಷಿಕರಿಗೆ ನೆರವಾದ ಡ್ಯಾಂ : ವಿನಯಕುಮಾರ್ ಕಂದಡ್ಕ

ಸುಳ್ಯದ ನಗರದ ನೀರು ಸರಬರಾಜು ವ್ಯವಸ್ಥೆಗೆ ಅನುಕೂಲವಾಗುವಂತೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಹದಿನೇಳು ಕೋಟಿ ರೂಪಾಯಿಗಳ ವೆಂಟೆಡ್ ಡ್ಯಾಮ್ ನಿರ್ಮಾಣ ಆಗಿದೆ. ಬಹುಶಃ ಕಳೆದ ಬೇಸಿಗೆಯಲ್ಲಿ ಮೇ ತಿಂಗಳ ಆರಂಭದ ವೇಳೆಗೆ ಕೇವಲ ಮೂರು ದಿನಗಳಿಗೆ ಮಾತ್ರ ನೀರು ಸಂಗ್ರಹವಿದ್ದ ಸಮಯದಲ್ಲಿ ಅದೃಷ್ಟ ವಶಾತ್ ಮಳೆ ಬಂದ ಕಾರಣದಿಂದಾಗಿ ನೀರಿನ ಸಮಸ್ಯೆ ಇಲ್ಲವಾಗಿತ್ತು. ಆದರೆ ಇದೀಗ ಈ ವೆಂಟೆಡ್ ಡ್ಯಾಮ್ ನಿರ್ಮಾಣದಿಂದಾಗಿ ಸುಳ್ಯ ನಗರದ ನೀರು ಸರಬರಾಜಿಗೆ ಯಾವುದೇ ನೀರಿನ ಕೊರತೆ ಉಂಟಾಗಿರುವುದಿಲ್ಲ. ಅಲ್ಲದೆ ಸುಳ್ಯ ಹಾಗೂ ಆಲೆಟ್ಟಿ ಗ್ರಾಮದ ಅನೇಕರಿಗೆ ನೀರಿನ ಒಸರು ಹೆಚ್ಚಿರುವುದರಿಂದ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಸಾಕಷ್ಟು ಅನುಕೂಲವಾಗಿದೆ. ಇದೀಗ ಕೇಂದ್ರ ಸರಕಾರದ ಅಮೃತ್ 2 ಯೋಜನೆಯಲ್ಲಿ ನಗರದ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ಮುಂದಿನ 30 ವರ್ಷಗಳ ಕಾಲ ಸುಳ್ಯ ನಗರಕ್ಕೆ ನೀರು ಸರಬರಾಜಿನಲ್ಲಿ ಕೊರತೆಯಾಗದಂತೆ ಈ ಯೋಜನೆ ಜಾರಿಗೊಳ್ಳಲಿದೆ ಎಂದು ನ.ಪಂ.ಮಾಜಿ ಅಧ್ಯಕ್ಷ ವಿಜಯಕುಮಾರ್ ಕಂದಡ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!