ಕೂಜಿಮಲೆಯಲ್ಲಿ ಅಪರಿಚಿತ ಮಹಿಳೆ ನಿನ್ನೆ ಪತ್ತೆಯಾಗಿದ್ದು ಈಕೆ ನಕ್ಸಲ್ ಗುಂಪಿಗೆ ಸೇರಿದವರು ಎಂದು ಸುದ್ದಿಯಾಗಿತ್ತು. ಆದರೆ ಈಕೆ ನಕ್ಸಲ್ ಗುಂಪಿಗೆ ಸೇರಿದವರಲ್ಲ ಬದಲಾಗಿ ಈಕೆ ರಾಜಸ್ಥಾನ್ ಮೂಲದವಳಾಗಿದ್ದು ಎಂದು ತಿಳಿದುಬಂದಿದೆ. ಆಕೆಯನ್ನು ಪೊಲೀಸರು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ ಇದೀಗ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಆಶ್ರಮಕ್ಕೆ ಸೇರ್ಪಡೆಗೊಳಿಸಲಾಗುವುದೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಕೂಜಿಮಲೆ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಮಹಿಳೆ ನಕ್ಸಲ್ ಎಂಬ ಸುದ್ದಿ ತಿಳಿದ ಎ ಎನ್ ಎಫ್ ತಂಡ ಮತ್ತು ಕೊಡಗು ಜಿಲ್ಲಾ ಶಸ್ತ್ರಸ್ಥ ಪಡೆಯ ಸಿಬ್ಬಂದಿಗಳು ಎಸ್ಟೇಟ್ ಗೆ ಭೇಟಿ ನೀಡಿ ಪರಿಶೀಲಿಸಿ ಆಕೆಯನ್ನು ಪತ್ತೆ ಹಚ್ಚಿ ಮಡಿಕೇರಿಗೆ ಕರೆತರಲಾಗಿದೆ. ರಾತ್ರಿ 2 ಗಂಟೆ ತನಕ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ರಾಮ್ ರಾಜನ್ ರವರು ಕೂಡ ಉಪಸ್ಥಿತರಿದ್ದು ಆಕೆಯ ಸಂಪೂರ್ಣ ವಿಚಾರಣೆಗೆ ಒಳಪಡಿಸಿದ ನಂತರ ಈ ಮಹಿಳೆ ನಕ್ಸಲ್ ತಂಡಕ್ಕೆ ಸೇರಿದವರು ಅಲ್ಲ ಎಂದು ದೃಢಪಟ್ಟಿದೆ. ನಿನ್ನೆ ಮಾಧ್ಯಮಗಳಲ್ಲಿ ಬಂದ ಸುದ್ದಿಗಳು ಸುಳ್ಳಾಗಿದ್ದು ಕೊಡಗು ಜಿಲ್ಲಾ ಪೊಲೀಸ್ ಹಾಗೂ ಏ.ಎನ್.ಎಫ್ ತಂಡ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.