Ad Widget

ಪ್ರತಿಷ್ಠಿತ ಕಣವಾಗಿರುವ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರಿಚಯ

ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಲ್ಲೆಯ ಪ್ರಭಾವಿ ಬಿಲ್ಲವ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜನಾರ್ಧನ ಪೂಜಾರಿಯರ ಶಿಷ್ಯ, ಕಳೆದ 25 ವರ್ಷಗಳಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಪದ್ಮರಾಜ್ ರಾಮಯ್ಯನವರಿಗೆ ಟಿಕೆಟ್ ನೀಡಲಾಗಿದೆ.

ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ಸಮಾಜಕ್ಕೊಬ್ಬ ಮಾದರಿ ವಕೀಲರಾಗಿದ್ದಾರೆ.

ಪದ್ಮರಾಜ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರುನಲ್ಲಿ ವಾಸ್ತವ್ಯವಿದ್ದ ಮಂಗಳೂರು ಮೂಲದ ಎಚ್.ಎಂ. ರಾಮಯ್ಯ ಪೂಜಾರಿ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರ. ಅವರು ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ. ಪದವಿಯನ್ನು ಬೆಳ್ತಂಗಡಿಯ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು.

1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದ ಇವರು ನಾಲ್ಕು ವರ್ಷಗಳ ಬಳಿಕ ಮಂಗಳೂರಿನ ಬಳ್ಳಾಲ್‌ಬಾಗ್‌ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧ‌ರ್ ಅವರ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್ ಸದಸ್ಯರಾದರೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಬಿ.ಜನಾರ್ದನ ಪೂಜಾರಿಯವರು ಸ್ಪರ್ಧಿಸಿದ ಎಲ್ಲಾ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜಸೇವೆಯನ್ನು ಮೈಗೂಡಿಸಿಕೊಂಡಿರುವ ಪದ್ಮರಾಜ್ ಅವರಿಗೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ ಭಕ್ತಿ. ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿಪದ್ಮರಾಜ್ ರವರು ಮಂಗಳೂರಿನ ನವರಾತ್ರಿ ಉತ್ಸವ ವಿಶ್ವ ಪ್ರಸಿದ್ಧಿ ಪಡೆಯಲು ಶ್ರಮ ಪಟ್ಟಿದ್ದಾರೆ.

ಕೊರೊನಾ ಮಹಾಮಾರಿಯಿಂದಾಗಿ 40 ದಿನಗಳ ಲಾಕ್‌ಡೌನ್‌ ಉಂಟಾದ ಸಂದರ್ಭ ದೇವಸ್ಥಾನದ ವತಿಯಿಂದ ದಿನಂಪ್ರತಿ ಸುಮಾರು 1000 ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ನಡೆಯುತ್ತಿತ್ತು. ಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗುತ್ತಿದ್ದರು

ಪದ್ಮರಾಜ್‌ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 300 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್‌ಡೌನ್ ಸಂದರ್ಭದಲ್ಲಿ ತನ್ನ ಮುಂದಾಳತ್ವದ ಗುರು ಬೆಳದಿಂಗಳು ಪೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಾಗ್ರಿ ತಲುಪಿಸಿದರು. ಗುರು ಬೆಳದಿಂಗಳು ಪೌಂಡೇಶನ್ ಅಶಕ್ತರ ಕಣ್ಣೀರು ಒರೆಸಲು ಪದ್ಮರಾಜ್ ಆರಂಭಿಸಿದ ಪೌಂಡೇಷನ್. ಇದರ ಮೂಲಕ ಸಾವಿರಾರು ನೊಂದವರಿಗೆ ಸಹಾಯ ಮಾಡಲಾಗಿದೆ.

ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು, ಜೆ.ಸಿ. ಪ್ರತಿಷ್ಠಾನ ದ.ಕ. ಜಿಲ್ಲಾ ಗೌರವ ಸಂಚಾಲಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಘ ಸಂಸ್ಥೆಗಳಿಂದ ಇವರ ಸಮಾಜಮುಖಿ ಸೇವೆಗೆ ಗೌರವ ಸಂದಿದೆ. ನಮ್ಮ ಕುಡ್ಲ ವಾಹಿನಿ ನೀಡುವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪದ್ಮರಾಜ್‌ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡವರು. 2 ವರ್ಷಗಳ ಹಿಂದೆ ಗಣ ರಾಜ್ಯೋತ್ಸವದ ಸಂದರ್ಭ ಕೇಂದ್ರ ಸರಕಾರ ನಾರಾಯಣ ಗುರುಗಳ ಟ್ಯಾಬ್ಲೊ ಪ್ರದರ್ಶನವನ್ನು ನಿರಾಕರಿಸಿದಾಗ ಅದರ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ದ್ದವರು. ಇವರ ಮುಂದಾಳತ್ವದಲ್ಲಿ ಗುರುಗಳಿಗೆ ಆದ ಅವಮಾನದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿತ್ತು. ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ 10ನೇ ತರಗತಿಯ ಪಠ್ಯಪುಸ್ತಕದ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಠ್ಯ ಕೈಬಿಟ್ಟದ್ದರ ವಿರುದ್ಧ ಮೊದಲು ಖಂಡನೆ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಗುರುಗಳ ಪಠ್ಯವನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading