ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದ್ದು ದೇವಸ್ಥಾನದ ಜೋರ್ಣೋದ್ಧಾರ ಕಾರ್ಯಗಳಿಗಾಗಿ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ಹಾಗೂ ವೈಯಕ್ತಿಕ ದೇಣಿಗೆಯಾಗಿ ರೂ. 1 ಲಕ್ಷ ನೀಡುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ಭರವಸೆ ನೀಡಿದ್ದಾರೆ.
ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಬಳಿಕ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರ ಜೊತೆಗೆ ಮಾತನಾಡಿದ ಅವರು ಕಾರ್ಯಕ್ರಮಗಳಿಗೆ ಶುಭ ಕೋರಿದರಲ್ಲದೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಮುಂಬರುವ ಎಪ್ರಿಲ್ 13 ರಿಂದ ಮೊದಲ್ಗೊಂಡು ಮೇ 4 ರವರೆಗೆ ದೇವಸ್ಥಾನ ಹಾಗೂ ಪರಿವಾರ ದೈವ- ದೇವರುಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ನಡೆಯಲಿದ್ದು, ಈ ಬಗ್ಗೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಉಪಾಧ್ಯಕ್ಷ ದಾಮೋದರ ಪಾತಿಕಲ್ಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಮಾತೃ ಸಮಿತಿ ಸಂಚಾಲಕಿ ವಿನುತಾ ಪಾತಿಕಲ್ಲು, ಅರ್ಚಕ ಅನಂತಕೃಷ್ಣ ಪಾಙಣ್ಣಾಯ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ಬ್ರಹ್ಮಕಲಶೋತ್ಸವ ಉಪ ಸಮಿತಿಯ ಸಂಚಾಲಕ ಶಶಧರ ಕಡಂಬಳಿತ್ತಾಯ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ರೈ ಮೇನಾಲ, ಮಾಜಿ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಮೊದಲಾದವರು ಈ ವೇಳೆ ಹಾಜರಿದ್ದರು.
—
- Saturday
- November 23rd, 2024