ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಹೋಟೆಲ್ ಕಾರ್ಮಿಕನ ಮೃತ ದೇಹವನ್ನು ಕೊಂಡೊಯ್ಯಲು ಸಂಬಂಧಿಕರು ಯಾರೂ ಬಾರದ ಹಿನ್ನೆಲೆಯಲ್ಲಿ ಸುಳ್ಯ ಠಾಣಾ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ.
ರಥಬೀದಿಯಲ್ಲಿ ಕಾರ್ಯಚರಿಸುತ್ತಿದ್ದ ಸ್ವಾಮಿ ಪ್ರಸಾದ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಲೂಲು ಎಂಬುವವರು ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೃತ ವ್ಯಕ್ತಿಯ ಕುಟುಂಬಸ್ಥರು ಮತ್ತು ಪರಿಚಯಸ್ತರು ಯಾರು ಬಾರದ ಹಿನ್ನೆಲೆಯಲ್ಲಿ ಕಳೆದ 12 ದಿನಗಳಿಂದ ಮೃತ ದೇಹವನ್ನು ಸುಳ್ಯ ಕೆವಿಜಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಲಾಗಿತ್ತು.
ಬಳಿಕ ವ್ಯಕ್ತಿಯ ಸಂಬಂಧಿಕರು ಯಾರಾದರೂ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಮಾಧ್ಯಮಗಳಲ್ಲಿ ಪೊಲೀಸ್ ಪ್ರಕಟಣೆಗಳನ್ನು ನೀಡಲಾಗಿತ್ತು.
ಆದರೆ ಇದುವರೆಗೆ ಯಾರು ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಮೃತ ದೇಹವನ್ನು ಸುಳ್ಯ ಕೇರ್ಪಳದ ರುದ್ರ ಭೂಮಿಯಲ್ಲಿ ಪೊಲೀಸ್ ಇಲಾಖೆ ಮತ್ತು ಸುಳ್ಯ ನಗರ ಪಂಚಾಯತ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದಿಂದ ಅಂತ್ಯ ಸಂಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ
ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಉಪನಿರೀಕ್ಷಕರಾದ ಸರಸ್ವತಿ,ಪೊಲೀಸ್ ಸಿಬ್ಬಂದಿಗಳು, ಹಾಗೂ ನಗರ ಪಂಚಾಯತ್ ಸಿಬ್ಬಂದಿಗಳು,ಸ್ಥಳೀಯರು ಉಪಸ್ಥಿತರಿದ್ದರು.