ಸುಳ್ಯ: ಸ್ವಾರ್ಥತೆಯಲ್ಲಿ ಪರಮಾರ್ಥತೆ ಇರಬೇಕು. ಮನುಷ್ಯತ್ವ ಇದ್ದರೆ ಮಾತ್ರ ಆತ ಮನುಷ್ಯನಾಗುತ್ತಾನೆ. ಆಗ ಜಾತಿ, ಧರ್ಮ, ಕುಲ, ಬಣ್ಣಗಳ ಭೇದವಿಲ್ಲದೆ ನದಿ ನೀರುಣಿಸುವಂತೆ ದೇವರು ನಮ್ಮನ್ನು ಕಾಪಾಡುತ್ತಾನೆ. ಸನಾತನ ಹಿಂದೂ ಧರ್ಮ ಈ ನಾಡಿನ ಎಲ್ಲ ಧರ್ಮದವರನ್ನು ಕಾಪಾಡುತ್ತದೆ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್. ಕೆ ನಾಯರ್ ಹೇಳಿದರು. ಅವರು ಸೋಮವಾರ ಸುಳ್ಯದ ಸೂರ್ತಿಲ ಶ್ರೀ ರಕ್ತೇಶ್ವರಿ ಗುಳಿಗ ಮತ್ತು ನಾಗದೇವರ ಸಾನಿಧ್ಯದಲ್ಲಿ ಜರಗಿದ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಹಣದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ. ನಮ್ಮಲ್ಲಿ ಇರುವ ಆಸ್ತಿ ಸಂಪತ್ತು ನಮ್ಮದಲ್ಲ. ಈ ನೆಲದ ದೈವ ದೇವರ ನೆಲೆಗಳು ನಮ್ಮ ನಿಜವಾದ ಸಂಪತ್ತು ಎಂದವರು ಹೇಳಿದರು. ಸಾನಿಧ್ಯದ ವೈದಿಕ ಕಾರ್ಯ ನಡೆಸಿದ ಬ್ರಹ್ಮಶ್ರೀ ವಾಸುದೇವ ತಂತ್ರಿಗಳು ಆಶೀರ್ವಚನ ನೀಡಿದರು. ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಶುಭ ಹಾರೈಸಿದರು. ಸಮಿತಿಯ ಅಧ್ಯಕ್ಷ ಡಾ. ಲೀಲಾಧರ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್ ಭಾರದ್ವಾಜ್, ನ.ಪಂ. ಸದಸ್ಯೆ ಪ್ರವಿತಾ ಪ್ರಶಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ನಾರಾಯಣ ಕೇಕಡ್ಕ, ಜಯರಾಮ ಸೂರ್ತಿಲ, ಕೃಷ್ಣ ಬೆಟ್ಟ ಉಪಸ್ಥಿತರಿದ್ದರು. ಗಣೇಶ್ ಆಳ್ವ ವಂದಿಸಿದರು. ಬೂಡು ರಾಧಾಕೃಷ್ಣ ರೈ ಹಾಗೂ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024