
ಜೀವನದಲ್ಲಿ ಪ್ರತಿಯೊಬ್ಬರಿಗೂ ಕೆಲವೊಂದು ನಿರೀಕ್ಷೆಗಳಿರುತ್ತವೆ. ಕೆಲವರಿಗೆ “ನಾನು ಇವತ್ತು ಚೆನ್ನಾಗಿ ಓದಿದ್ರೆ ನಾಳೆ ನಂಗೆ ಒಳ್ಳೆಯ ಕೆಲಸ ಸಿಗುತ್ತೆ” ಅನ್ನೋ ನಿರೀಕ್ಷೆ, ಇನ್ನೂ ಕೆಲವರಿಗೆ “ನಾನು ಜೀವನದಲ್ಲಿ ಏನೋ ಒಂದು ಸಾಧನೆ ಮಾಡೋದಕ್ಕೆ ಹೊರ್ಟಿದ್ದೀನಿ, ನಂಗೆ ಯಶಸ್ಸು ಸಿಕ್ಕೇ ಸಿಗುತ್ತೆ” ಅನ್ನೋ ನಿರೀಕ್ಷೆ. ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ಅದ ನಿರೀಕ್ಷೆಗಳಿರುತ್ತವೆ. ನಿರೀಕ್ಷೆ ಅನ್ನೋದಕ್ಕಿಂತ ನಂಬಿಕೆ ಎನ್ನಬಹುದು. ಅದೇನೇ ಇರಲಿ ಆದರೆ “ನಿರೀಕ್ಷೆಗಳ ಹಾದಿಯಲ್ಲಿ ಪರೀಕ್ಷೆಗಳು ಸಹಜ” ಅನ್ನುವ ಮಾತಿನಂತೆ ಆ ನಿರೀಕ್ಷೆಯ ಮಟ್ಟವನ್ನು ತಲುಪುವ ದಾರಿಯಲ್ಲಿ ಹಲವಾರು ಪರೀಕ್ಷೆಗಳು ಕೂಡ ಬರುತ್ತವೆ. ಆ ಪರೀಕ್ಷೆಗಳು ಆ ಸಂದರ್ಭದಲ್ಲಿ ನಮಗೆ ನಮ್ಮ ಗುರಿಯನ್ನು ತಲುಪುವ ದಾರಿಯಲ್ಲಿ ಅಡ್ಡಲಾಗಿ ಕಾಣಬಹುದು. ಆದರೆ ಆ ಪರೀಕ್ಷೆಗಳೇ ನಮಗೆ ಜೀವನದಲ್ಲಿ ಮುಂದೆ ಸಾಗಲು ಶಕ್ತಿಯನ್ನು ನೀಡುತ್ತವೆ. ಹಾಗಂತ ಪರೀಕ್ಷೆಗಳೇನೂ ನಾವಂದುಕೊಂಡಂತೆ ಇರುವುದಿಲ್ಲ ಮತ್ತು ಬರುವುದಿಲ್ಲ. ಅವು ಪ್ರತೀ ಬಾರಿಯೂ ಅನಿರೀಕ್ಷಿತವಾಗಿಯೇ ಬರುತ್ತವೆ ಮತ್ತು ಇರುತ್ತವೆ.
ಎಲ್ಲೋ ಓದಿದ ನೆನಪು “ಶಾಲೆಯಲ್ಲಿ ನಾವು ಪಾಠ ಓದಿದ ನಂತರ ಪರೀಕ್ಷೆ ಬರೆಯುತ್ತೇವೆ, ಆದರೆ ಜೀವನದ ಶಾಲೆಯಲ್ಲಿ ಮೊದಲು ಪರೀಕ್ಷೆಗಳು ಬರುತ್ತವೆ ಮತ್ತು ಆ ಪರೀಕ್ಷೆಗಳಿಂದ ನಾವು ಪಾಠವನ್ನು ಕಲಿಯುತ್ತೇವೆ ಮತ್ತು ಆ ಪರೀಕ್ಷೆಗಳಿಂದ ಕಲಿತ ಪಾಠ ಜೀವನಪರ್ಯಂತ ನೆನಪಿನಲ್ಲಿ ಉಳಿಯುತ್ತದೆ” ಅಂತ.
ಜೀವನದಲ್ಲಿ ಪರೀಕ್ಷೆಗಳು ಮಾತ್ರವಲ್ಲ, ಸವಾಲುಗಳು ಕೂಡ ಅನಿರೀಕ್ಷಿತವಾಗಿಯೇ ಬರುತ್ತವೆ. ಆ ಕ್ಷಣ ನಮಗೆ ಆ ಸವಾಲು ಅಥವಾ ಪರೀಕ್ಷೆಗಳನ್ನು ಎದುರಿಸಲು ಕಷ್ಟವೆಂದು ಅನ್ನಿಸಬಹುದು. ಆದರೆ ಅಂತಿಮವಾಗಿ ನಾವು “ಅನಿರೀಕ್ಷಿತ ಪರೀಕ್ಷೆಗಳೇ ನಮ್ಮನ್ನು ನಿರೀಕ್ಷಿತ ಗುರಿಯೆಡೆಗೆ ತಲುಪಿಸುತ್ತವೆ” ಎಂಬುವುದನ್ನು ಅರಿಯಬೇಕಷ್ಚೆ…
✍️ಉಲ್ಲಾಸ್ ಕಜ್ಜೋಡಿ
