ಜಗತ್ತಿನಲ್ಲಿ ಪ್ರತಿಯೊಬ್ಬರ ಜೀವನವೂ ಕೂಡ ಪ್ರಾರಂಭವಾಗೋದು ಶೂನ್ಯದಿಂದಲೇ. ಶೂನ್ಯದಿಂದ ಪ್ರಾರಂಭವಾದ ಈ ಪಯಣದಲ್ಲಿ ಬದುಕು ನಮಗೆ ನೂರಾರು ಪಾಠಗಳನ್ನು ಕಲಿಸುತ್ತಾ ಮುಂದೆ ಸಾಗುತ್ತೆ. ಇಲ್ಲಿ ಸೋಲು ಹೇಗೆ ಗೆಲ್ಬೇಕು ಅಂತ ಕಲ್ಸಿದ್ರೆ, ಕಷ್ಟ ಹೇಗೆ ಬದುಕ್ಬೇಕು ಅಂತ ಕಲಿಸುತ್ತೆ. ನಾವಿಡುವ ಪ್ರತಿಯೊಂದು ಹೆಜ್ಜೆಗಳಲ್ಲೂ ಕೂಡ ಬದುಕು ಒಂದೊಂದು ಹೊಸ ಸವಾಲುಗಳನ್ನು ನಮ್ಮೆದುರು ತಂದು ನಿಲ್ಸುತ್ತೆ. ಮೊದಮೊದಲು ನಮಗೆ ಬದುಕು ನೀಡುವ ಸವಾಲುಗಳನ್ನು ಎದುರಿಸಲು ಕಷ್ಟ ಆಗ್ಬೋದು. ಯಾಕಂದ್ರೆ ಮೊದಲ ಹೆಜ್ಜೆಯಲ್ಲಿ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಅನುಭವ ಕಡಿಮೆ ಇರುತ್ತೆ. ಆದ್ರೆ ಒಮ್ಮೆ ಸೋಲ್ಬೋದು, ಮತ್ತೊಮ್ಮೆ ಸೋಲ್ಬೋದು, ಮೂರನೇ ಸಲ ಖಂಡಿತ ಗೆಲ್ಬೋದು, ಪ್ರಯತ್ನ ಪಡೋದ್ರಲ್ಲಿ ತಪ್ಪೇನು ಅನ್ನುವ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ರೆ ಪ್ರತಿಯೊಂದು ಸವಾಲುಗಳನ್ನು ಮೆಟ್ಟಿ ಮುಂದಡಿ ಇಡ್ಬೋದು. ಅದನ್ನು ಬಿಟ್ಟು ಮೊದಲ ಸೋಲಿಗೆ ಹೆದರಿ “ನಾನು ಸೋತೆ, ನನ್ನಿಂದ ಏನೂ ಸಾಧಿಸೋದಕ್ಕೆ ಆಗೋದಿಲ್ಲ” ಅಂತ ಹತಾಶೆಯಿಂದ ನಿಂತ್ರೆ ನಾವು ಎಲ್ಲಿ ನಿಂತಿದ್ದೇವೋ ಅಲ್ಲೇ ನಿಂತಿರ್ತೇವೆ ಹೊರತು ಬದುಕಿನಲ್ಲಿ ಮುಂದೆ ಸಾಗೋದಕ್ಕೆ ಸಾಧ್ಯವಾಗೋದಿಲ್ಲ. ಆದ್ದರಿಂದ ಕಷ್ಟಪಟ್ಟಾದ್ರೂ ಸರಿ ಸವಾಲುಗಳನ್ನು ಸ್ವೀಕರಿಸಿ ಎದುರಿಸುತ್ತಾ ಮುಂದೆ ಸಾಗಿದ್ರೆ ಅದೇ ದೊಡ್ಡ ಸಾಧನೆ, ಯಾಕಂದ್ರೆ ದೊಡ್ಡವರು ಹೇಳಿದ್ದಾರೆ “ಸವಾಲುಗಳನ್ನು ಸ್ವೀಕರಿಸಿ ಮುಂದೆ ಸಾಗುವುದೇ ಬದುಕು” ಅಂತ.ಪ್ರತೀ ಬಾರಿ ಬದುಕು ನಮಗೆ ಸವಾಲುಗಳನ್ನು ನೀಡುತ್ತೆ ಅಂತ ನಾವು ಕಾಯ್ತಾ ಕೂರಬಾರದು.
ನಾವು ಗುರಿಯನ್ನು ತಲುಪಿ ಬದುಕಿನಲ್ಲಿ ಯಶಸ್ಸನ್ನು ಗಳಿಸ್ಬೇಕು ಅಂದ್ರೆ ಕೆಲವೊಮ್ಮೆ ನಮಗೆ ನಾವೇ ಸವಾಲುಗಳನ್ನು ಸೃಷ್ಟಿಸಿಕೊಂಡು ಮುಂದೆ ಸಾಗ್ಬೇಕಾಗುತ್ತೆ. ಯಾಕಂದ್ರೆ “ಸವಾಲುಗಳನ್ನು ಸೃಷ್ಟಿಸಿಕೊಂಡು ಮುನ್ನಡೆಯುವವರನ್ನು ಇತಿಹಾಸ ನೆನಪಿಡುತ್ತದೆ.”ಬದುಕು ನಮಗೆ ನೀಡಿದ ಸವಾಲುಗಳು, ನಮಗೆ ನಾವೇ ಸೃಷ್ಟಿಸಿಕೊಂಡ ಸವಾಲುಗಳು ಇವುಗಳನ್ನೆಲ್ಲಾ ಎದುರಿಸಿ ಸೋತು ಗೆದ್ದು ಮುನ್ನಡೆದು ಒಂದು ದಿನ ನಾವು ನಮ್ಮ ಕನಸಿನ ಗುರಿಯ ಉತ್ತುಂಗಕ್ಕೆ ತಲುಪುತ್ತೇವೆ, ಹಲವಾರು ವರ್ಷಗಳ ಕಾಲ ನಾವು ಪಟ್ಟ ಪರಿಶ್ರಮಕ್ಕೆ ಫಲ ಸಿಗುತ್ತೆ, ನಮ್ಮ ಕನಸು ನನಸಾಗುತ್ತೆ, ನಾವು ಯಶಸ್ಸಿನ ಉತ್ತುಂಗವನ್ನು ಮುಟ್ಟುತ್ತೇವೆ.
ಯಶಸ್ಸಿನ ಉತ್ತುಂಗಕ್ಕೆ ತಲುಪಿ ಒಮ್ಮೆ ಹಿಂತಿರುಗಿ ನೋಡಿದಾಗ ನಮಗೆ ನಾವು ಶೂನ್ಯದಿಂದ ಸಾಧನೆಯೆಡೆಗೆ ಸಾಗಿ ಬಂದ ನಮ್ಮ ಪ್ರತಿಯೊಂದು ಹೆಜ್ಜೆಗಳು, ಆ ಹೆಜ್ಜೆಗಳಲ್ಲಿನ ಸವಾಲುಗಳು, ಆ ಸವಾಲುಗಳಿಂದ ನಾವು ಕಲಿತ ಪಾಠಗಳು ಎಲ್ಲವೂ ಕಾಣುತ್ತೆ. ಆದ್ರೆ ಗುರಿಯ ಉತ್ತುಂಗಕ್ಕೆ ತಲುಪಿದ ನಂತರ ನಾವು ವಿಶ್ರಾಂತಿ ಪಡೆಯುವಂತಿಲ್ಲ. ಯಾಕಂದ್ರೆ ಇಲ್ಲಿಂದ ನಮ್ಮ ಯಶಸ್ಸಿನ ಹಾದಿ ಪ್ರಾರಂಭವಾಗುತ್ತೆ. ಅಸಲಿ ಸವಾಲುಗಳು ಪ್ರಾರಂಭವಾಗೋದು ಇಲ್ಲಿಂದಲೇ. ಆದ್ರೆ ಇಲ್ಲಿ ಬರೋ ಸವಾಲುಗಳು ನಮಗೆ ಹೊಸದು ಅನಿಸೋದಿಲ್ಲ. ಅಥವಾ ಸೋಲುತ್ತೇವೆ ಅನ್ನುವ ಭಯ ಇರೋದಿಲ್ಲ. ಯಾಕಂದ್ರೆ ಶೂನ್ಯದಿಂದ ಶುರುವಾದ ನಮ್ಮ ಬದುಕಿನ ಪಯಣದಲ್ಲಿ ಬದುಕು ನಮಗೆ ಪ್ರತಿಯೊಂದು ಹೆಜ್ಜೆಯಲ್ಲೂ ಒಂದೊಂದು ಸವಾಲುಗಳನ್ನು ನೀಡಿ ನಮ್ಮನ್ನು ಗಟ್ಟಿಗೊಳಿಸಿದೆ, ಸವಾಲುಗಳನ್ನು ಎದುರಿಸಿ ಮುಂದೆ ಸಾಗೋದು ಹೇಗೆ ಎಂದು ಕಲಿಸಿಕೊಟ್ಟಿದೆ. ಆದ್ರೆ ಯಶಸ್ಸಿನ ಹಾದಿಯಲ್ಲಿ ಸಾಗುವ ಸಂದರ್ಭದಲ್ಲಿ ನಾವು ಈ ಹಿಂದೆ ಬದುಕು ನಮಗೆ ನೀಡಿದ ಸವಾಲುಗಳನ್ನು ಮತ್ತು ಆ ಸವಾಲುಗಳಿಂದ ನಾವು ಕಲಿತ ಪಾಠಗಳನ್ನು ಎಂದಿಗೂ ಮರಿಬಾರ್ದು.
ಒಂದು ವೇಳೆ ನಾವು ಗುರಿಯನ್ನು ತಲುಪಿದ ನಂತರ ನಮ್ಮ ಯಶಸ್ಸಿನ ಹಿಂದಿರುವ ಸವಾಲುಗಳನ್ನು ಹಾಗೂ ಆ ಸವಾಲುಗಳಿಂದ ನಾವು ಕಲಿತ ಪಾಠಗಳನ್ನು ಮರೆತು ಮುನ್ನಡೆದರೆ ನಮ್ಮ ಯಶಸ್ಸಿನ ಹಾದಿ ಮತ್ತೆಂದೂ ಗೆಲ್ಲಲಾಗದಂತಹ ಸೋಲಿನ ಹೊಡೆತಕ್ಕೆ ಸಿಲುಕುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ “ಬದುಕು ಕಲಿಸುವ ಪಾಠಗಳನ್ನು ಕಲಿಯಬೇಕು, ಆದರೆ ಆ ಪಾಠಗಳನ್ನು ಮರೆತು ಮುನ್ನಡೆಯಬಾರದು, ಏಕೆಂದರೆ ಅನುಭವವೇ ಬದುಕಿನ ಅತೀ ದೊಡ್ಡ ಪಾಠ”.
✍️ಉಲ್ಲಾಸ್ ಕಜ್ಜೋಡಿ