ಜೀವನದಲ್ಲಿ ಒಂದು ಹಂತದವರೆಗೆ ನಮಗೆ ಅದು ಬೇಕು, ಇದು ಬೇಕು, ಆ ವಸ್ತು ತಗೊಳ್ಬೇಕು, ಈ ವಸ್ತು ತಗೊಳ್ಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ಆ ಹಂತ ದಾಟಿದ ನಂತರ ನಮಗೆ ಆ ವಸ್ತು ಬೇಕಾಗಿರಲ್ಲ. ನಾವು ಚಿಕ್ಕವರಿರುವಾಗ ಆಟಿಕೆಗಳು ಬೇಕು ಅಂತ ಹಟ ಮಾಡ್ತೀವಿ ಆದ್ರೆ ದೊಡ್ಡವರಾದ ನಂತರ ನಮಗೆ ಆಟಿಕೆಗಳು ಬೇಕಾಗಿರಲ್ಲ. ಅದೇ ರೀತಿ ಜೀವನದ ಪ್ರತಿಯೊಂದು ಹಂತಗಳಲ್ಲೂ ಕೂಡ ಒಂದೊಂದು ಆಸೆಗಳು, ನಿರೀಕ್ಷೆಗಳು ಸೃಷ್ಟಿಯಾಗುತ್ತವೆ. ಕೆಲವೊಮ್ಮೆ ಜೀವನ ಅನಿವಾರ್ಯತೆಗಳನ್ನೂ ಕೂಡ ಸೃಷ್ಟಿಮಾಡಿಬಿಡುತ್ತದೆ. ಅದೇ ರೀತಿ ನಾವು ದೊಡ್ಡವರಾಗ್ತಾ ಆಗ್ತಾ ನಮಗೆ ಜೀವನ ಏನೆಂದು ಅರ್ಥವಾದಾಗ ಹಣದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಯಾವಾಗ ನಮ್ಮ ಜೀವನದಲ್ಲಿ ಹಣದ ಅನಿವಾರ್ಯತೆ ಹೆಚ್ಚಾಗುತ್ತದೋ ಅವತ್ತಿನಿಂದ ನಾವು ಹೆಚ್ಚು ಹಣ ಗಳಿಸ್ಬೇಕು ಅನ್ನೊ ಉದ್ದೇಶದಿಂದ ಓಡೋದಕ್ಕೆ ಶುರು ಮಾಡ್ತೀವಿ. ಒಳ್ಳೆಯ ದಾರಿಯಲ್ಲಿ ಹಗಲು ರಾತ್ರಿ ಕಷ್ಟಪಟ್ಟು ಮುಂದೆ ಸಾಗಿ ಬೇಕಾದಷ್ಟು ಹಣ, ಆಸ್ತಿ, ಅಂತಸ್ತು ಎಲ್ಲವನ್ನೂ ಸಂಪಾದನೆ ಮಾಡ್ತೀವಿ. ಆದ್ರೆ ಒಂದು ವೇಳೆ ಆ ಅನಿವಾರ್ಯತೆ ದುರಾಸೆಯಾಗಿ ಪರಿವರ್ತನೆಯಾದ್ರೆ ಆ ಹಣದ ಹಿಂದಿನ ಓಟದಲ್ಲಿ ನಾವು ನಮ್ಮವರನ್ನೆಲ್ಲರನ್ನೂ ಮರೆಯುವಷ್ಟು ಮುಂದೆ ಸಾಗಿರ್ತೀವಿ. ಅಷ್ಟು ಮುಂದೆ ಸಾಗಿ ಒಮ್ಮೆ ಹಿಂತಿರುಗಿ ನೋಡಿದಾಗ ನಮ್ಮ ಹತ್ರ ಹಣ, ಆಸ್ತಿ, ಅಂತಸ್ತು ಎಲ್ಲವೂ ಇರುತ್ತೆ ಆದರೆ ನಮ್ಮವರಾರೂ ನಮ್ಮ ಜೊತೆ ಇರೋದಿಲ್ಲ, ನಾವು ಒಬ್ಬಂಟಿಯಾಗಿ ನಿಂತಿರ್ತೀವಿ. ಆವಾಗ ನಮಗೆ “ನಾನೆಷ್ಟು ಸ್ವಾರ್ಥಿ, ನಾನು ನನ್ನವರನ್ನೆಲ್ಲಾ ಮರೆತು ಮುಂದೆ ಸಾಗ್ಬಾರ್ದಿತ್ತು. ನಾನು ತಪ್ಪು ಮಾಡಿದ್ದೀನಿ” ಅಂತ ಅನ್ಸುತ್ತೆ. ಆದ್ರೆ ಮತ್ತೆ ಹಿಂತಿರುಗಿ ಹೋಗೋಣ ಅಂದ್ರೆ ಇಷ್ಟು ದೂರ ಬಂದು ಮತ್ತೆ ಹಿಂತಿರುಗಿ ಹೋಗೋದಕ್ಕೆ ಮನಸ್ಸು ಒಪ್ಪೋದಿಲ್ಲ. ಆದ್ರೆ ಹೃದಯ ನಮಗೆ “ಮತ್ತೆ ಹಿಂತಿರುಗಿ ಹೋಗು” ಅಂತ ಹೇಳ್ತಿರುತ್ತೆ. ಈವಾಗ ನಾವು ಮನಸ್ಸಿನ ಮಾತನ್ನು ಕೇಳೋದಾ ಅಥವಾ ಹೃದಯದ ಮಾತನ್ನು ಕೇಳೋದಾ ಅನ್ನೋ ಗೊಂದಲಕ್ಕೆ ಬೀಳ್ತೀವಿ.
ಆದ್ರೆ ಕೊನೆಗೆ ನಮ್ಮ ಮನಸ್ಸಿಗೂ ಅನ್ಸುತ್ತೆ “ಇಷ್ಟು ದೂರ ಬಂದಿದ್ದೀನಿ, ಇಷ್ಟು ಹಣ, ಆಸ್ತಿ, ಅಂತಸ್ತು ಸಂಪಾದನೆ ಮಾಡಿದ್ದೀನಿ ನಿಜ. ಆದ್ರೆ ಇವತ್ತು ನನ್ನ ಜೊತೆ ಯಾರೂ ಇಲ್ಲ, ನಾನು ನನ್ನವರನ್ನೆಲ್ಲಾ ಕಳ್ಕೊಂಡು ಒಂಟಿಯಾಗಿದ್ದೀನಿ” ಅಂತ. ಆವಾಗ ನಮಗೆ ನಮ್ಮ ತಪ್ಪಿನ ಅರಿವಾಗಿ “ನಾನು ಈ ಪಯಣದಲ್ಲಿ ಯಾರನ್ನೂ ಮರೆತು ಮುಂದೆ ಸಾಗ್ಬಾರ್ದಿತ್ತು” ಆಂತ ಅನ್ಸುತ್ತೆ. ಆದ್ರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ. ನಮ್ಮ ಜೀವನ ಕೂಡ ಕೊನೆಯ ಹಂತಕ್ಕೆ ಬಂದಿರುತ್ತೆ. ಕೊನೆಗೊಂದು ದಿನ ನಾವು ಕೂಡ ಈ ಭೂಮಿಯಿಂದ ಹೊರಟು ಹೋಗ್ತೀವಿ.
ನಾವು ಈ ಭೂಮಿಯಿಂದ ಹೋರಟು ಹೋಗುವಾಗ ನಾವು ಜೀವನ ಪೂರ್ತಿ ಸಂಪಾದಿಸಿದ ಹಣ, ಅಸ್ತಿ, ಅಂತಸ್ತು ಯಾವುದೂ ನಮ್ಮ ಜೊತೆ ಬರೋದಿಲ್ಲ, ನಾವು ತೆಗೆದುಕೊಂಡು ಹೋಗೋದಕ್ಕೂ ಆಗೋದಿಲ್ಲ. ನಾವು ಈ ಭೂಮಿಯಿಂದ ಹೊರಟು ಹೋಗೋದು “ಇರುವುದೆಲ್ಲವ ಬಿಟ್ಟು…”
”ಜೀವನದಲ್ಲಿ ಮುಂದೆ ಸಾಗ್ಬೇಕು ನಿಜ ಆದರೆ ನಮ್ಮವರನ್ನು ಮರೆಯುವಷ್ಟು ಮುಂದೆ ಸಾಗ್ಬಾರ್ದು…”
✍️ಉಲ್ಲಾಸ್ ಕಜ್ಜೋಡಿ