Ad Widget

“ಮರದ ಕಾಲುಸಂಕ ಮುಕ್ತ ಅಭಿಯಾನ‌” ಆರಂಭಿಸಿದ ಯುವ ತೇಜಸ್ಸು ಬಳಗ – ಬೇಕಿದೆ ಸಾರ್ವಜನಿಕರ ಸಹಕಾರ

ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದು ನಾಣ್ಣುಡಿ. ಸಮಾಜದಲ್ಲಿನ ಸತ್ತು‌ಹೋದ ಕೆಲ ಮನಸ್ಸುಗಳ ನಡುವೆ ಜೀವಂತ ಶವಗಳಾಗುವ ಬದಲು ನಮ್ಮಿಂದ ಸಮಾಜಕ್ಕೇನಾದರೂ ಸಹಾಯ ಮಾಡಬಹುದು ಎಂಬ ಸಮಾನ ಮನಸ್ಕರ ಗುಂಪೊಂದು ಯೋಚಿಸಿದ ಫಲವಾಗಿ ಹುಟ್ಟಿಕೊಂಡ ಸಂಸ್ಥೆಯೇ ಯುವ ತೇಜಸ್ಸು ಟ್ರಸ್ಟ್. ಸಾಮಾಜಿಕ ಜಾಲತಾಣದ‌ ಬಳಕೆಯಿಂದ ಯುವ ಸಮೂಹ ಕೆಡುಕಿನತ್ತ ಸಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಸಮಾಜದಲ್ಲಿನ ಅಶಕ್ತರ ಪಾಲಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಆಶಯದೊಂದಿಗೆ ಆರಂಭವಾದ ಯುವ ತೇಜಸ್ಸು ಸಂಸ್ಥೆ ಬಳಿಕ ಹೆಮ್ಮರವಾಗಿ ಬೆಳೆದಿದ್ದು ಈಗ ಇತಿಹಾಸ.
ಯುವ ಜನಾಂಗವನ್ನೇ ಸೇತುವೆಯನ್ನಾಗಿಸಿಕೊಂಡು ಸಮಾಜದ ಅಸಹಾಯಕರ ಕಷ್ಟಗಳಿಗೆ ನೆರವಾಗುತ್ತಾ ಅವರ ಜೀವನದಲ್ಲಿ ನಗುವಿನ ದಡ ಸೇರಿಸುವಲ್ಲಿ ಯುವ ತೇಜಸ್ಸು ಟ್ರಸ್ಟ್ ಇದುವರೆಗೆ ತನ್ನಿಂದಾದ ನೆರವು ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯದೊಂದಿಗೆ ತನ್ನಿಂದಾದ ಅಳಿಲು ಸೇವೆಯನ್ನು ಸಮಾಜಕ್ಕೆ ನೀಡುತ್ತ ಕಳೆದ ಎಂಟು ವರ್ಷಗಳಿಂದ ತನ್ನದೇ ಕಾರ್ಯದಲ್ಲಿ ಯುವ ತೇಜಸ್ಸು ಬಳಗ ತೊಡಗಿದೆ‌.
ಬಡತನದ ನೋವನ್ನು ಅರಿತ ಬಡ ಸದಸ್ಯರಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಸೇವೆ ಮಾಡುವ ಸಲುವಾಗಿ ಆರಂಭಗೊಂಡ ಸಂಸ್ಥೆ ದಾನಿಗಳಿಂದ ಪ್ರತಿತಿಂಗಳಿಗೆ ಒಂದಿಷ್ಟು ಸಮಾಜಕ್ಕಾಗಿ ಮೀಸಲಿಡಿ ಎಂಬ ಭಿನ್ನಹದೊಂದಿಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್ ಗ್ರೂಪ್ ಗಳಲ್ಲಿ ತನ್ನ ಸೇವಾ ವೈಖರಿಯನ್ನು ಬಿತ್ತರಿಸುತ್ತ ಅಂತೆಯೇ ಹಣಕಾಸಿನ ವ್ಯವಹಾರವನ್ನು ಪಾರದರ್ಶಕವಾಗಿ ತಿಂಗಳಿಗೊಮ್ಮೆ ವರದಿ ನೀಡಿಕೊಂಡು ಅಪಾರ ಜನ ಮನ್ನಣೆಗೆ ಪಾತ್ರವಾಗಿದೆ ಯುವ ತೇಜಸ್ಸು ಬಳಗ. ನಿರಂತರವಾಗಿ ದಕ್ಷಿಣ ಕನ್ನಡ, ಮಡಿಕೇರಿ, ಕಾಸರಗೋಡು, ಉಡುಪಿ ಜಿಲ್ಲೆಯಾದ್ಯಂತ ಬಡ ಕುಟುಂಬದ ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ ,ಶಿಕ್ಷಣ ಸಂಸ್ಥೆಗಳಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯಧನ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಧಾರ್ಮಿಕ ಕ್ಷೇತ್ರಗಳಲ್ಲಿ ಕರಸೇವೆ, ಪ್ರಾಕೃತಿಕ ವಿಕೋಪಗಳಿಂದ ಹಾನಿಯಾದ ಪ್ರದೇಶದಲ್ಲಿ ಸದಸ್ಯರಿಂದ ಸಾಮೂಹಿಕ ಶ್ರಮದಾನ ನಡೆಸುತ್ತಾ ಬಂದಿದೆ.
ಯುವ ತೇಜಸ್ಸು ಸಂಸ್ಥೆಯ ಸಾಮಾಜಿಕ ಸೇವೆಯನ್ನು ಪ್ರೋತ್ಸಾಹಿಸುವ ಸದಸ್ಯರು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿರುವ, ಊರಿನ ಪರೋಪಕಾರಿ ಮನೋಭಾವ ಹೊಂದಿರುವ ಸಹೃದಯಿ ದಾನಿಗಳ ಸಹಕಾರದಿಂದ, ಬೆಂಬಲದಿಂದ ಇದುವರೆಗೆ 134 ಯೋಜನೆಯ ಮೂಲಕ ಸುಮಾರು ನಲವತ್ತು ಲಕ್ಷಕ್ಕೂ ಅಧಿಕ ಮೊತ್ತಗಳಷ್ಟು ಧನಸಹಾಯವನ್ನು ನೊಂದ ಕುಟುಂಬಗಳಿಗೆ ನೀಡಿದ್ದು, ತನ್ನ ಸೇವೆಯನ್ನು ವಿಸ್ತರಿಸುತ್ತಾ ಯುವ ತೇಜಸ್ಸು ಸಂಸ್ಥೆಯು ಯುವ ಜನಾಂಗದ ಚಿತ್ತವನ್ನು ತನ್ನತ್ತ ಸೆಳೆಯುತ್ತಾ ಸಾಗುತ್ತಿದ್ದು ಹಂತಹಂತವಾಗಿ ಬೆಳವಣಿಗೆಯತ್ತ ಮುಖ ಮಾಡಿದೆ.
ಕಳೆದ ವರ್ಷದಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭಗೊಂಡ ಯುವ ತೇಜಸ್ಸು ಅಂಬ್ಯುಲೆನ್ಸ್ ಕೂಡ ಸಮಾಜಕ್ಕೆ ಈ ಸಂಸ್ಥೆ ನೀಡಿದ ಕೊಡುಗೆ. ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸುರಕ್ಷಿತವಾಗಿ ಸೇರಿಸುವ ಮಹತ್ತರವಾದ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ. ತೀರಾ ಅಗತ್ಯ ಎನಿಸುವ ಕುಟುಂಬಗಳಿಗೆ ಉಚಿತ ಸೇವೆ ನೀಡುತ್ತಾ, ಅತ್ಯಲ್ಪ ಗೌರವಧನ ಪಡೆದು ಉತ್ಕೃಷ್ಟ ಸೇವೆ ನೀಡುವಲ್ಲಿ ಯುವ ತೇಜಸ್ಸು ಅಂಬ್ಯುಲೆನ್ಸ್ ಯಶಸ್ವಿಯಾಗಿದೆ.
ಇದೀಗ ಈ ಸಂಸ್ಥೆಯು ತನ್ನ ಮಾಸಿಕ ಯೋಜನೆಯ ಜೊತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರದ ಅಪಾಯಕಾರಿ ಕಾಲುಸಂಕ ನಿರ್ಮೂಲನೆ ಮಾಡಿ ಸುಸಜ್ಜಿತವಾದ ಸುರಕ್ಷಿತ ಕಬ್ಬಿಣದ ಕಾಲುಸಂಕ ನಿರ್ಮಿಸುವ ಅಭಿಯಾನಕ್ಕೆ ಮುಂದಡಿ ಇಟ್ಟಿದೆ. ಈ ಯೋಜನೆಯು ಸಾರ್ವಜನಿಕ ರಸ್ತೆಯಲ್ಲಿ ಅತಿ ಹೆಚ್ಚು ಮನೆಗಳ ಸಂಪರ್ಕ ಹೊಂದಿದ ಅಪಾಯಕಾರಿ ಮರದ ಕಾಲುಸಂಕ ಇರುವ ಯೋಜನೆಯನ್ನು ಕೈಗೆತ್ತಿಕೊಂಡು ಮೊದಲ ಪ್ರಾಶಸ್ತ್ಯದಲ್ಲಿ ಸುಸಜ್ಜಿತ ಕಬ್ಬಿಣದ ಕಾಲುಸಂಕ ನಿರ್ಮಿಸುವ ಮೂಲಕ ಸಮಸ್ಯೆಗಳಿಗೆ ಮುಕ್ತಿ ಕೊಡುವ ಕಾರ್ಯ ಮಾಡುವ ದೃಢ ಸಂಕಲ್ಪ ಮಾಡಿದೆ.
ಹಾಗಾಗಿ ನಿಮ್ಮ ಊರಿನ ಅಪಾಯಕಾರಿ ಮರದ ಕಾಲು ಸಂಕದ ಪೋಟೋ ಸಮೇತ ವಿವರಗಳನ್ನು ಯುವ ತೇಜಸ್ಸು ಸಂಸ್ಥೆಗೆ ನೀಡಿದಲ್ಲಿ, ಅತೀ ಅಗತ್ಯ ಎನಿಸುವ ಸ್ಥಳಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ, ಜಿಲ್ಲೆಯ ಪ್ರತಿ ಭಾಗದ ಮರದ ಅಪಾಯಕಾರಿ ಕಾಲುಸಂಕಗಳನ್ನು ತೆರವುಗೊಳಿಸಿ ಉತ್ತಮವಾದ ಕಬ್ಬಿಣದ ಕಾಲುಸಂಕ ನಿರ್ಮಾಣಕ್ಕೆ ಯುವ ತೇಜಸ್ಸು ಬಳಗ ಮುಂದಾಗಲಿದೆ‌.
ಮರದ ಕಾಲು ಸೇತುವೆಗಳ ವಿವರಗಳನ್ನು 94801 77770, 88610 74919, 76187 46761, 91085 87145, 80888 37771 ವಾಟ್ಸಾಪ್ ನಂಬರ್ ಗೆ ಕಳಿಸಬಹುದು. ಹಾಗೂ ಧನ ಸಹಾಯ ನೀಡಲು ಆಸಕ್ತಿ ಇರುವವರು 9740206706 ಸಂಖ್ಯೆಗೆ ಗೂಗಲ್ ಪೇ, ಪೋನ್ ಪೇ, ಪೇಟಿಯಂ ಮುಖಾಂತರ ಅಥವಾ ಸಂಸ್ಥೆಯ ಬ್ಯಾಂಕ್ ಖಾತೆ ( ಖಾತೆ ಹೆಸರು: YUVA TEJASSU, ಖಾತೆ ಸಂಖ್ಯೆ: 01782200083523, IFSC CODE: CNRB0010178, Canara Bank, Panja Branch) ಜಮೆ ಮಾಡಿ ಸಮಾಜಸೇವೆಯಲ್ಲಿ ಭಾಗಿಗಳಾಗಿ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!