ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಅಗೋಸ್ಟ್ 22ರಂದು ಸಂಘದ ಸಮನ್ವಯ ಸಭಾಂಗಣದಲ್ಲಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘವು ವರದಿ ವರ್ಷದಲ್ಲಿ 93.66 ಕೋಟಿ ವ್ಯವಹಾರ ಮಾಡಿ ರೂ.4001879.43 ದಾಖಲೆಯ ನಿವ್ವಳ ಲಾಭಗಳಿಸಿರುತ್ತದೆ. 97.38% ರಷ್ಟು ಸಾಲ ವಸೂಲಾತಿ ಮಾಡಿದ್ದು, ಆಡಿಟ್ ವರ್ಗದಲ್ಲಿ ಸಂಘವು ಸತತ 12 ವರ್ಷಗಳಿಂದ “ಎ ” ತರಗತಿಯನ್ನು ಪಡೆದಿರುತ್ತದೆ. ಹಿಂದಿನ ಸಾಲಿಗೆ ಹೋಲಿಸಿದರೆ ಪಾಲು ಬಂಡವಾಳದಲ್ಲಿ, ಧನ ವಿನಿಯೋಗದಲ್ಲಿ, ಒಟ್ಟು ವ್ಯವಹಾರದಲ್ಲಿ, ಲಾಭಾಂಶದಲ್ಲಿ, ಹೊರಬಾಕಿ ಸಾಲದಲ್ಲಿ ಹಾಗೂ ಠೇವಣಿಯಲ್ಲಿ ಪ್ರಗತಿ ಸಾಧಿಸಲಾಗಿದೆ.
ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಸಭಾಧ್ಯಕ್ಷತೆ ವಹಿಸಿ ಸಂಘದ ಪ್ರಗತಿಯ ಬಗ್ಗೆ ವಿವರಿಸಿದರು. ಸಂಘಕ್ಕೆ ಈ ಬಾರಿಯೂ ಜಿಲ್ಲಾ ಬ್ಯಾಂಕ್ ಪ್ರಶಸ್ತಿ ಬಂದಿದ್ದು ಸಂಘಕ್ಕೆ ಇದು ಪ್ರಶಸ್ತಿ ದೊರೆಯುತ್ತಿರುವುದು ಸತತ 9ನೇ ಬಾರಿ ಆಗಿರುತ್ತದೆ. ಸಂಘಕ್ಕೆ ಪ್ರಶಸ್ತಿ ಬರಲು ಹಾಗೂ ಸಂಘದ ಅಭಿವೃದ್ಧಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಕೊರೋನದಂತಹ ಸಂಕಷ್ಟದ ಸಮಯದಲ್ಲಿ ಗ್ರಾಮದ 950 ಜನರಿಗೆ ರೂ.500 ಮೌಲ್ಯದ ಕಿಟ್ಟನ್ನು ವಿತರಿಸಿ ವಿತರಿಸಲಾಗಿದೆ. ಅಲ್ಲದೇ ಸಾಲಗಳ 3 ಕಂತನ್ನು ಮುಂದೂಡಿ 90 ದಿವಸಗಳ ಬಡ್ಡಿಯಲ್ಲಿ 2% ಬಡ್ಡಿ ಯನ್ನು ಮನ್ನಾ ಮಾಡಿರುವುದು, ಸದಸ್ಯರ ಆರೋಗ್ಯ ಕಲ್ಯಾಣ ನಿಧಿ ಹಾಗೂ ಸದಸ್ಯರ ಮರಣ ನಿಧಿಯ ಬಗ್ಗೆ, ಸಂಘವು ಶತ ಸಂಭ್ರಮದ ಆಚರಣೆಯಲ್ಲಿರುವುದರಿಂದ 1ನೇ ಜೂನ್ 2022 ರಿಂದ ವಿತರಿಸುವ ಸಂಘದ ಸ್ವಂತ ಬಂಡವಾಳದ ಸಾಲಕ್ಕೆ 11% ಮಾಡಿರುವುದನ್ನು ಮಹಾಸಭೆಗೆ ತಿಳಿಸಲಾಯಿತು. ಅಲ್ಲದೆ ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮದ ಮನೆಗಳಿಗೆ ಸೌರ ವಿದ್ಯುತ್ ಅಳವಡಿಕೆಗೆ ಗರಿಷ್ಠ ಒಂದು ಲಕ್ಷ ಸಾಲಕ್ಕೆ 365 ದಿವಸಕ್ಕೆ 0% ಬಡ್ಡಿದರದಲ್ಲಿ ಸಾಲ ವಿತರಣೆ ಬಗ್ಗೆ, ಸಂಘದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಅಳವಡಿಸಿರುವ EMV ಚಾರ್ಜರ್ ನ ಬಗ್ಗೆ, ರಬ್ಬರ್ ಉತ್ಪಾದಕರಿಂದ ಉತ್ತಮ ಬೆಲೆಯಲ್ಲಿ ರಬ್ಬರ್ ಶೀಟ್ ಗಳನ್ನು ಖರೀದಿಸಿರಿ ಅದನ್ನು ನೇರವಾಗಿ ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡುವ ಸೌಲಭ್ಯ ಬಗ್ಗೆ ವಿವರಿಸಲಾಯಿತು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ 85%ಕ್ಕಿಂತ ಅಂಕ ಗಳಿಸಿದ ಗ್ರಾಮದ ಸದಸ್ಯರ 18 ಮಕ್ಕಳಿಗೆ ವಿದ್ಯಾರ್ಥಿವೇತನ ಮೊತ್ತ ರೂ.61,000/-ವನ್ನು ಸ್ಮರಣಿಕೆಯೊಂದಿಗೆ ವಿತರಿಸಲಾಯಿತು.
ಸಂಘದ ಸದಸ್ಯರಾದ ಕೆ ಪಿ ಜಗದೀಶ್, ಪುಷ್ಪರಾಜ ಗಾಂಭೀರ, ಮಂಜುನಾಥ ಕೆ, ನಾಗೇಶ ಪಿ ಆರ್, ಸಾಜಿ ಮಾಧವನ್, ಕುಶಾಲಪ್ಪ ಮುಂತಾದವರು ಚರ್ಚಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ವಾರ್ಷಿಕ ವರದಿ ಹಾಗೂ ಆರ್ಥಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘದ ನಿರ್ದೇಶಕರಾದ ಗಣಪತಿ ಭಟ್ ಪಿಎನ್, ಆನಂದ ಪಿಎಲ್, ಜಗದೀಶ ರೈ ಕೆಆರ್, ಹಮೀದ್ ಎಚ್, ಚಂದ್ರಶೇಖರ ಕೆ ಯು, ಉಷಾ ಕೆಎಂ, ಸುಮತಿ ಶಕ್ತಿವೇಲು, ಯಮುನಾ ಬಿಎಸ್, ಪ್ರಕಾಶ್ ಕೆಪಿ, ರಾಜೀವಿ ಕೆ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಪುತ್ಯ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ ಜಾನಿ ಕೆ ಪಿ ರವರು ವಂದಿಸಿದರು. ಜಯಾನಂದ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.
- Tuesday
- December 3rd, 2024