Ad Widget

ಅಂತರಾಷ್ಟ್ರೀಯ ಸ್ನೇಹದಿನ

. . . . .

ಕವಿ “ನಾ ಕೃ ಸತ್ಯನಾರಾಯಣ” ಅವರು ಬರೆದ ಸುಂದರ ಭಾವಗೀತೆ “ಸ್ನೇಹ ಅತಿ ಮಧುರ , ಸ್ನೇಹ ಅದು ಅಮರ……” ಎಂಬ ಹಾಡಿನ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ,
ಅಗೋಸ್ತು ತಿಂಗಳ ಮೊದಲ ಭಾನುವಾರ ಬಂತೆಂದರೆ ನೆನೆಪಿಸಬೇಕಾದ ವಿಷಯವೆಂದರೆ ‘ “ಸ್ನೇಹದಿನ”. ಹ್ಯಾಪಿ ಫ್ರೆಂಢ್ ಶಿಪ್ ಡೇ ಎಂದು ಕೈ ಕುಲುಕುವ ಮಾತ್ರಕ್ಕೆ ಇಂದು ಸ್ನೇಹ-ಸಂಬಂಧ ನಿಂತಿದೆ. ಪ್ರತಿವರ್ಷ ಅಗೋಸ್ತು ತಿಂಗಳ ಪ್ರಥಮ ‘ಭಾನುವಾರವನ್ನು ಅಂತರಾಷ್ಟ್ರೀಯ ಸ್ನೇಹದಿನವಾಗಿ ಆಚರಿಸಲಾಗುತ್ತದೆ. ಈ ಸ್ನೇಹ ಅನ್ನೋ ಎರಡಕ್ಷರವನ್ನು ಇಂದು ಒಂದು ವ್ಯಕ್ತಿಯಲ್ಲಿ ಕಟ್ಟಿಹಾಕೋದು ಕಷ್ಟ. ಈ ದಿನವನ್ನು ಗೆಳೆಯರಿಗೆ ಅರ್ಪಿಸುವ ಪರಿಪಾಠವನ್ನು ಆರಂಭಿಸಿದ್ದು ಅಮೇರಿಕ. 1935ರಲ್ಲಿ ಅಮೇರಿಕ ಸರಕಾರವು ಒಬ್ಬ ಮನುಷ್ಯನನ್ನು ಆಗೋಸ್ತು ತಿಂಗಳ ಮೊದಲ ಶನಿವಾರ ಕೊಲ್ಲುತ್ತಾರೆ. ಅದರ ಮಾರನೇ ದಿನವೇ ಆತನ ಗೆಳೆಯ ತನ್ನ ಗೆಳೆಯನ ಮರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆತನ ನೆನಪಿಗಾಗಿ ಆಗೋಸ್ತು ತಿಂಗಳ ಮೊದಲ ಭಾನುವಾರವನ್ನು “ಫ್ರೆಂಡ್ ಶಿಪ್” ದಿನ ಎಂದು ಅಮೇರಿಕ ಸಂಸತ್ ಘೋಷಿಸಿತು. ಅಮೇರಿಕದಲ್ಲಿ ಇದು ಜನಪ್ರಿಯವಾದ ನಂತರ ಭಾರತ ಸೇರಿದಂತೆ ವಿಶ್ವದ ಇತರ ದೇಶಗಳು ಈ ಆಚರಣೆಯನ್ನು ಆಚರಿಸಿಕೊಂಡು ಬರುತ್ತಿವೆ. ಆದರೆ ಬರಬರುತ್ತಾ ಕಾಲನ ಚಕ್ರಕ್ಕೆ ಮರುಳಾಗಿ ಇಂತಹ ವಿಶೇಷ ದಿನಗಳು ಮರೆವಿನ ಅಂಚಿನಲ್ಲಿ ಸಾಗುತ್ತಿರುವುದು ವಿಪರ್ಯಾಸ.

ಸ್ನೇಹ ಎನ್ನುವಂತಹದು ಎಲ್ಲವನ್ನೂ ಮೀರಿ ನಿಲ್ಲುವಂತಹ ಸಂಬಂಧ. ಇಲ್ಲಿ ಕಪಟವಿಲ್ಲ, ಸ್ವಾರ್ಥವಿಲ್ಲ ಭೂಮಿ ಮೇಲೆ ಸ್ನೇಹ ಹಾಗೂ ಪ್ರೀತಿಯ ಮೇಲೆ ಎಲ್ಲವೂ ನಿಂತಿದೆ. ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ ಸಿಗುತ್ತಾರೆ. ಬಾಲ್ಯದಿಂದ ಹಿಡಿದು ವೃದ್ಧಾಪ್ಯದ ತನಕ. ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾದರೆ ಕೆಲವು ಹಾಗೆ ಸ್ನೇಹಿತರಾಗಿ ಉಳಿಯುತ್ತಾರೆ. ಇನ್ನು ಕೆಲವರು ನಮಗೆ ಪಾಠ ಕಲಿಸಿದವರಾಗಿರುತ್ತಾರೆ.


ಒಬ್ಬ ಸ್ನೇಹಿತನನ್ನು / ವ್ಯಕ್ತಿಯನ್ನು ಆಳವಾಗಿ ತಿಳಿದುಕೊಂಡ ಮೆಲೆಯೇ ಆತ /ಆಕೆ ಯನ್ನು ನಂಬಬೇಕು. ಎಲ್ಲಾ ಸ್ನೇಹಿತರು ನಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತುಂಬಲು ಸಾಧ್ಯವಿಲ್ಲ. ಜೀವನದ ಪಯಣದಲ್ಲಿ ನಾವು ವಿವಿಧ ರೀತಿಯ ಸ್ನೇಹಿತರನ್ನು ಕಾಣುತ್ತೇವೆ.
ನಾವು ಯಾರೊಂದಿಗಿರುವಾಗ ನಮ್ಮ ನೈಜತೆಯನ್ನು, ನಮ್ಮತನವನ್ನು ಕಳೆದುಕೊಳ್ಳುವುದಿಲ್ಲವೋ ಆ ವ್ಯಕ್ತಿಯನ್ನೇ ನಮ್ಮ ಸ್ನೇಹಿತ ಎಂದು ಕರೆಯಬಹುದು. ನಾವು ಏನಾಗಿದ್ದೇವೋ ಹೇಗಿದ್ದೇವೋ ಅದಕ್ಕಾಗಿಯೇ ನಮ್ಮನ್ನು ಇಷ್ಟಪಡುವವನು ಸ್ನೇಹಿತ. ನಮ್ಮಲ್ಲಿರುವ ಅಪರಿಪೂರ್ಣತೆಯನ್ನು ಸ್ವೀಕರಿಸಿ, ವಿಭಿನ್ನತೆಯನ್ನು ಗೌರವಿಸುವವನೇ ನಿಜವಾದ ಗೆಳೆಯ. ಸ್ನೇಹ ಅನ್ನುವುದು ಹುಟ್ಟುವುದೂ ಇಲ್ಲ, ಅದು ಸಾಯುವುದೂ ಇಲ್ಲ. ನಾವು ಸ್ನೇಹಿತರಾಗಿ ಹುಟ್ಟಿರುತ್ತೇವೆ, ಸ್ನೇಹಿತರನ್ನು ಮಾಡಿಕೊಳ್ಳುವುದಿಲ್ಲ ಎನ್ನುವುದು ನನ್ನ ಅನುಭವ ಒಪ್ಪಿದ ಮಾತು.
ಅಂತೆಯೇ ಇತಿಹಾಸದಿಂದ ಹಲವಾರು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಅದು ನಮಗೆ ನಿಜವಾದ ಸ್ನೇಹದ ಮೌಲ್ಯಗಳನ್ನು ಕಲಿಸಿಕೊಟ್ಟಿದೆ.

ನಮ್ಮ ಪುರಾಣವನ್ನು ಒಮ್ಮೆ ತಿರುವಿದಾಗ ಅಲ್ಲಿ ಬಿಡಿಸಲಾಗದ ಸ್ನೇಹವನ್ನು ಕಾಣುತ್ತೇವೆ. ಮಹಾಭಾರತದಲ್ಲಿ ಕಂಡುಬರುವ ಧುರ್ಯೋಧನ ಮತ್ತು ಕರ್ಣ ಇವರಿಬ್ಬರ ಸ್ನೇಹ ಹೇಗಿರುತ್ತದೆ ಎಂದರೆ ಒಮ್ಮೆ ಕರ್ಣ ಧುರ್ಯೋಧನನ ಪತ್ನಿಯ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ ಅನಿವಾರ್ಯವಾಗಿ ಆಕೆಯನ್ನು ಹಿಡಿಯಲು ಹೋಗಿ ಆಕೆಯ ಸರ ಕಿತ್ತು ಮಣಿಗಳೆಲ್ಲಾ ಚೆಲ್ಲಾಪಿಲ್ಲಿ ಯಾಗುತ್ತದೆ, ಆ ಸಂಧರ್ಭದಲ್ಲಿ ಅಲ್ಲಿಗೆ ಧುರ್ಯೋಧನ ಬರುತ್ತಾನೆ. ಬಂದವನು ಸ್ವಲ್ಪವೂ ಅನುಮಾನಿಸದೆ ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳಿದಾಗ, ಧುರ್ಯೋಧನ ಹೇಳುವುದು -ಗೆಳೆಯ ನನಗೆ ನಿನ್ನಲ್ಲಿ ನಂಬಿಕೆಯಿದೆ ಬಿಡು ಭಯವನ್ನು ಎಂದು ತಾನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ಧುರ್ಯೋಧನನಿಗೆ ತನ್ನ ಗೆಳೆಯನ್ನಲ್ಲಿ ನಂಬಿಕೆ ಇರುತ್ತದೆ. ಅದೇ ರೀತಿ ಕರ್ಣನು ಕುರುಕ್ಷೇತ್ರ ಯುದ್ಧ ಆರಂಭವಾದಾಗ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಾಂಡವರಿಗೆಲ್ಲ ಹಿರಿಯ, ಬಂದು ಪಾಂಡವರ ಜೊತೆ ಸೇರು ಎಂದಾಗ ಕರ್ಣ ಧುರ್ಯೋಧನನನ್ನು ಬಿಟ್ಟು ಪಾಂಡವರ ಜೊತೆ ಹೋಗುವುದಿಲ್ಲ ಕಾರಣವಿಷ್ಟೇ ತಾನು ದ್ರೌಪದಿ ಸ್ವಯಂವರದಲ್ಲಿ ಬಿಲ್ಲನ್ನು ಎತ್ತಲು ಬಂದಾಗ ಕರ್ಣನನ್ನು ಸೂತ ಪುತ್ರ ಎಂಬ ಕಾರಣಕ್ಕೆ ಬಿಲ್ಲನ್ನೇರಿಸಲು ನಿರಾಕರಿಸಲಾಗುತ್ತದೆ. ಆಗ ಅವನನ್ನು ಅಂಗ ದೇಶದ ರಾಜನನ್ನಾಗಿ ಮಾಡಿ ಅವನಿಗೆ ಸ್ಥಾನಮಾನ ಕಲ್ಪಿಸಿದವನು ಧುರ್ಯೋಧನ ಹೀಗೆ ಕರ್ಣನಿಗೆ ಹತ್ತು-ಹಲವು ಸಂಧರ್ಭದಲ್ಲಿ ಧುರ್ಯೋಧನ ಬೆಂಬಲವಾಗಿ ನಿಲ್ಲುತ್ತಾನೆ. ಹೀಗೆ ಮಹಾಭಾರತದಲ್ಲಿನ ಅವರಿಬ್ಬರ ಸ್ನೇಹ ಇಂದಿಗೂ ಎಂದೆಂದಿಗೂ ಅಮರವಾಗಿದೆ. ಹಾಗೆಯೇ ಕೃಷ್ಣ –ಕುಚೇಲರ ಕತೆಯೂ ಕೂಡ ಕುಚೇಲ ಒಬ್ಬ ಬಡವನಾಗಿ ಗೆಳೆಯನ ಮನೆಗೆ ಸಹಾಯ ಕೇಳಲು ಬಂದು ಸ್ನೇಹಿತನಲ್ಲಿ ತನ್ನ ಬಡತನವನ್ನು ಹೇಳಿಕೊಳ್ಳಲಾಗದೆ ಇದ್ದಾಗ, ಮತ್ತು ಕೃಷ್ಣನಿಗೆಂದು ತಂದ ಅವಲಕ್ಕಿಯನ್ನು ತನ್ನ ಹರಿದ ಬಟ್ಟೆಯಲ್ಲಿ ಗಂಟು ಕಟ್ಟಿ ಕೊಂಡಿದ್ದನ್ನು ಕಂಡು ಸ್ವತ: ಕೃಷ್ಣನೇ ಮಿತ್ರ ನನಗೆಂದು ತಂದಿರುವ ಆ ಗಂಟನ್ನು ಬಿಚ್ಚಿ ಅದರಲ್ಲಿದ್ದ ಅವಲಕ್ಕಿಯನ್ನು ಬಿಚ್ಚಿ ರುಕ್ಮಿಣಿಯ ಜೊತೆ ತಿನ್ನುತ್ತಾನೆ. ಅಲ್ಲದೆ ಸಹಾಯವನ್ನು ಬೇಡಲು ಬಂದು ಕೇಳದೆ ಹಿಂತಿರುಗಿದ ಕುಚೇಲರ ಬಡತನವನ್ನು ಹೋಗಲಾಡಿಸಿ ಮಿತೃತ್ವವನ್ನು ಮೆರೆಯುತ್ತಾನೆ. ಹೀಗೆ ನೋಡುತ್ತಾ ಹೋದರೆ ಎಷ್ಟೊಂದು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಗೋಚರಿಸುತ್ತವೆ.

ಪ್ರಿತಿಯಲ್ಲಿ ಮೋಸ ಇದೆ ನಿಜ, ಆದ್ರೆ ಇದೇನೂ ಸ್ನೇಹದಲ್ಲೂ ಮೋಸ ಅಡಗಿದೆಯ ಅಂತ ಯೋಚಿಸಬೇಡಿ. ಯಾಕಂದ್ರೆ ಮೋಸ ಮಾಡೋ ಹೃದಯ ಇದ್ರೆ ಅದು ಪ್ರಿತಿ, ಸ್ನೇಹ, ಸಂಬಂಧ ಯಾವುದನ್ನು ನೋಡುವುದಿಲ್ಲ. ಕಳ್ಳನಿಗೆ ಕನ್ನ ಹಾಕಲು ಮನೆಯ ಖಜನೆಯಾದರೆ ಏನು, ದೇವರ ಹುಂಡಿ ಯಾದರೆ ಏನು? ಅದೇ ರೀತಿಯ ಸ್ವಾರ್ಥದಿಂದ ಸ್ನೇಹದ ನಾಟಕವಾಡುವ ಸ್ನೇಹಿತರೂ ಕೂಡ ನಮ್ಮ ನಡುವೆ ಇದ್ದಾರೆ. ಎಂದಿಗೂ ಸ್ವಾರ್ಥದ ಸ್ನೇಹಕ್ಕೆ ಜಾಗ ಕೊಡಬೇಡಿ. ಸ್ನೇಹಿತರ ನಡುವೆ ಪೋಸ್ಸೆಸಿವ್ ನೆಸ್ ಸಾಮಾನ್ಯ. ಆದರೆ ಅದೇ ನಮಗೆ ಕಂಟಕ ಕೂಡ. ಸ್ನೇಹ ಬೆಳೆಸುವ ಮೊದಲು ಅವರ ವ್ಯಕ್ತಿತ್ವ ತಿಳಿದುಕೊಳ್ಳಬೇಕು. ಗಾಳಿ ಬಂದ ಕಡೆ ತೂರಿಕೊಳ್ಳುವ ಸ್ನೇಹಿತರ ಬಗ್ಗೆ ನಾವು ಜಾಗಾರೂಕರಾಗಿದ್ದು, ಅವರಿಂದ ಅದಷ್ಟೂ ದೂರ ಉಳಿಯುವುದೇ ವಾಸಿ.

ಜೀವನದಲ್ಲಿ ಮಾನವನಿಗೆ ಮೂವರು ಪರಮಾಪ್ತರಿರುತ್ತಾರೆ. ಮೊದಲಿಗರು ತಾಯಿ-ತಂದೆ, ಎರಡನೆಯವರು ಸನ್ಮಿತ್ರರು, ಹಾಗೂ ಮೂರನೇಯ ಸ್ಥಾನದಲ್ಲಿ ಗಂಡ-ಹೆಂಡತಿ/ಮಕ್ಕಳಿರುತ್ತಾರೆ. ‘ಪ್ರತಿಯೊಬ್ಬರ ಜೀವನದಲ್ಲಿಯೂ ಸ್ನೇಹಿತರು ಬಹಳ ಮುಖ್ಯ ಪಾತ್ರವಹಿಸುತ್ತಾರೆ. ತಂದೆ-ತಾಯಿ, ಅಕ್ಕ,-ತಮ್ಮ, ಅಣ್ಣ-ತಂಗಿ ಇವರೆಲ್ಲರ ಜತೆ ಹಂಚಿಕೊಳ್ಳಲಾಗದ ಎಷ್ಟೋ ವಿಚಾರಗಳನ್ನು ಸ್ನೇಹಿತರಲ್ಲಿ ಹಂಚಿಕೊಳ್ಳುತ್ತೇವೆ. ಸ್ನೇಹಿತರಿಗಾಗಿ ವಿಶಿಷ್ಟ ಸ್ಥಾನವನ್ನು ಕೊಟ್ಟಿರುತ್ತೇವೆ. ಅಂತಹ ಜೀವದ ಗೆಳೆಯ/ಗೆಳತಿಯರ ಜೊತೆ ಬಿನ್ನಾಭಿಪ್ರಾಯಗಳು ಬಂದಾಗ ನಾವು ಅದೆಷ್ಟೋ ನೋವು ಅವಮಾನ ಅನುಭವಿಸುವುದಿಲ್ಲ ಹೇಳಿ. ಸ್ನೇಹ ಯಾವಾಗ, ಎಲ್ಲಿ ಬೇಕಾದರೂ ಹುಟ್ಟಬಹುದು/ಸಾಯಬಹುದು. ನೋಡನೋಡುತ್ತಿದ್ದಂತೆಯೇ ಬೆಳೆದು ಹೆಮ್ಮರವಾಗಬಹುದು ಅಥವಾ ಬುಡದಿಂದಲೇ ತಿವುಚಬಹುದು. ಆಧುನಿಕ ಸ್ನೇಹದ ಮೇಲೆ ಅಸಹ್ಯ ಅನ್ನೋ ಭಾವನೆ ಮೂಡ್ತ ಇದೆ. ಹಲವು ಕಡೆಗಳಲ್ಲಿ ಸ್ನೇಹವೆಂಬ ಪವಿತ್ರ ಸಂಬಂಧ ತನ್ನ ಪ್ರಭುದ್ದತೆಯನ್ನು ವಿನಾಶದ ಅಂಚಿಗೆ ತಳ್ಳುತ್ತಿದೆ. ನಾವು ಪ್ರಭುದ್ದರಾದ ಹಾಗೆ ನಮ್ಮ ಭಾವನೆಗಳು, ಜೀವನಶೈಲಿ, ಚಿಂತನೆ ಹೀಗೆ ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಸಾಗುತ್ತದೆ.

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು…’ ಎಂಬ ಕವಿ ಚೆನ್ನವೀರ ಕಣವಿಯವರ ಪದ್ಯವೊಂದು ನೆನಪಾಗುತ್ತಾ ಇದೆ. ಒಂದೇ ಮನೋಭಾವ, ಒಂದೇ ಆಸಕ್ತಿ-ನಿರಾಸಕ್ತಿ, ಒಂದೇ ಆಯ್ಕೆ-ವಿಮುಖತೆ- ಹೀಗೆ ಹಲವು ‘“ಒಂದೇ”’ಗಳನ್ನು ಹೊಂದಿರುವ ಇಬ್ಬರ ನಡುವಿನ ಸಂಬಂಧವಾ? ಹೌದು. ಸ್ನೇಹ ಅಂತಸ್ತು, ಗೌರವ, ಸ್ಥಾನಮಾನಗಳ ಹಾರೈಕೆಯಲ್ಲಿ ಬೆಳೆಯುತ್ತಾ? ಹೌದು. ಯಾಕಂದ್ರೆ ಸ್ನೇಹ ಹುಟ್ಟುವುದು ಅವಶ್ಯಕತೆಗೆ. ನಮ್ಮ ಚಿಂತನೆಗೆ ಮನ್ನಣೆಯ ಅವಶ್ಯಕತೆ, ಸಂಕಷ್ಟಕ್ಕೆ ಸಾಂತ್ವನ, ಹಾಸ್ಯಕ್ಕೆ ನಗು, ಸಾಧನೆಗೆ ಮೆಚ್ಚುಗೆ, ಸಹಾಯಕ್ಕೆ ಕೃತಜ್ಞತೆಗಳನ್ನು ನಮ್ಮ ಮನಸ್ಸು ನಿರೀಕ್ಷಿಸುತ್ತದೆ. ಇಷ್ಟೇ ಅಲ್ಲದೆ ನಾವು ನಮ್ಮ ವ್ಯವಹಾರಗಳಲ್ಲಿ, ನಮ್ಮ ಆಯ್ಕೆಗಳಲ್ಲಿ, ಮತ್ತೊಬ್ಬರ ಬದುಕಿನಲ್ಲಿ ಐಡೆಂಟಿಟಿಯನ್ನು ಸ್ಥಾಪಿಸಬಯಸುತ್ತೇವೆ. ಒಟ್ಟಾರೆ ನಮ್ಮ ಭಾವಕ್ಕೆ ನಾವು ನಿರೀಕ್ಷಿಸಿದ ಪ್ರತಿಭಾವ ಎಲ್ಲಿ ದೊರೆಯುತ್ತೋ ಅಲ್ಲಿ ಒಂದು ನಂಬಿಕೆ ಮೊಳಕೆಯೊಡೆಯುತ್ತದೆ. ಕ್ರಮೇಣ ಈ ನಂಬಿಕೆಯಿಂದಾಗಿ ಅವಶ್ಯಕತೆಗಳು ತಂತಾನೇ ಪೂರೈಕೆಯಾಗಿ ಮಧುರ ಹೊಂದಾಣಿಕೆಗೆ ಎಡೆಮಾಡಿಕೊಡುತ್ತದೆ. ಬೇರೆ ಬೇರೆ ಮನಸ್ಥಿತಿಯನ್ನೂ ಅರ್ಥೈಸಿಕೊಳ್ಳುವುದು, ಭಾವನೆಗಳಿಗೆ ಪರಸ್ಪರ ಸ್ಪಂಧಿಸುವ, ಸುಖ ಕಷ್ಟ, ದು:ಖ ಧುಮ್ಮಾನಗಳನ್ನು ಹಂಚಿಕೊಳ್ಳುವ, ಪರಸ್ಪರ ಸಮಾಧಾನ ಪಡಿಸಿಕೊಳ್ಳುವಂತಹ ಸ್ನೇಹ ಸಂಬಂಧಗಳು ಏರ್ಪಡುವುದಕ್ಕೆ ನಮ್ಮಲ್ಲಿ ಸದಾ ಆಸಕ್ತಿ, ಹೊಂದಾಣಿಕೆಯ ಮನೋಭಾವ, ತಾಳ್ಮೆ ಅನುಮಾನಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ ಇರಬೇಕು. ಹೀಗೆ ಇದ್ದಾಗ ಮಾತ್ರ ನಮ್ಮ ಸ್ನೇಹ ಚಿರವಾಗಿರಲು ಸಾಧ್ಯ.

ಏನೆ ಇರಲಿ ಒಬ್ಬ ಮಾನವನ ಜೀವಿತದ ಅವಧಿಯಲ್ಲಿ ಆತನ ಮನಸ್ಸಿನ ಇಂಗಿತಗಳನ್ನು, ಆಶೆ-ಅಮೀಶಗಳನ್ನು ತನ್ನ ಹೆತ್ತವರಲ್ಲಿಯೂ ಹೇಳತೀರದ ಸಂದರ್ಭದಲ್ಲಿ ಆತ/ಆಕೆ ಗೆ ನೆರವಾಗುವವರು ಆತನ ಆಪ್ತಮಿತ್ರರರು. ಗೆಳತನ ಬೆಳೆಸೋದು ತುಂಬಾನೆ ಸುಲಭ. ಆ ಮೇಲೆ ತಾನೇ ಅವರು ಒಳ್ಳೆಯವರೋ ಇಲ್ಲವೋ ಅಂತ ಗೊತ್ತಾಗೋದು. ಸ್ನೇಹದಲ್ಲಿ ಸ್ನೇಹಿತನ ಅಭಿಪ್ರಾಯ, ಆಲೋಚನೆ, ನಡವಳಿಕೆಯನ್ನು ಹೊಂದಿಕೊಂಡು ಯೋಚಿಸುವಂತಹ ಹೊಂದಾಣಿಕೆಯ ಪರಿಜ್ಞಾನ ಅಗತ್ಯ. ಒಬ್ಬ ಮಾನವನಿಗೆ ಯಾವಾಗ ಅವನಿಗೆ ಅವನ ಬಗ್ಗೆ ಜ್ಞಾನ ಅರಿವಾಗುತ್ತದೆಯೋ ಅವಾಗಿನಿಂದಲೇ ಗೆಳೆಯ/ಗೆಳತಿಯ ಮಹತ್ವ ಗೊತ್ತಾಗುವುದು. ಸ್ನೇಹ ಬೆಳೆಸುವಾಗ ಚೆನ್ನಾಗಿ ಯೋಚಿಸಿ ಅಂದರೆ ಪರೋಕ್ಷವಾಗಿ ನಮಗೆ ಹಾನಿ ಮಾಡುತ್ತಿರುವ, ಪ್ರತ್ಯಕ್ಷದಲ್ಲಿ ಪ್ರಿಯ ಮಾತುಗಳಾನ್ನಾಡುತ್ತಿರುವ, ವಿಷಯವನ್ನು ಉದರದಲ್ಲಿರಿಸಿ ಬಾಯಿಯಿಂದ ಹಾಲು ಸುರಿಸುವ ಮಿತ್ರರಿಂದ ದಯವಿಟ್ಟು ದೂರವಿರಿ. ಸ್ನೇಹ ಎಲ್ಲರ ಬಾಳಿನಲ್ಲಿ ಕೂಡ ಸಹಜವಾಗಿ ಒಂದಲ್ಲ ಒಂದು ಕಡೆಯಿಂದ ಆರಂಭಗೊಂಡಿರುತ್ತದೆ. ಹಾಗೇ ನಾನಾ ವಿಧದಲ್ಲಿ ಅಂತ್ಯಗೊಂಡಿರುತ್ತದೆ.

“ ಎನಿತು ಜೀವದಲಿ ಎನಿತು ಜೀವರಿಗೆ. ಎನಿತು ನಾವು ಋಣಿಯೋ. ಅರಿತು ನೋದಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ” ಎಂಬ ಕವಿ ಜಿ. ಎಸ್. ಶಿವರುದ್ರಪ್ಪ ಅವರ ಹಾಡಿನ ಸಾಲನ್ನು ಗುನುಗುತ್ತಾ ಪ್ರಪಂಚದಲ್ಲಿ ಪ್ರತಿ ಹೆಜ್ಜೆಯಲ್ಲೂ ಸಿಕ್ಕ ಸ್ನೇಹಿತರಿಗೆ ಋಣಿಯಾಗಿರುತ್ತಾ.. ಅವರೆಲ್ಲರೂ ನಮ್ಮ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸ್ನೇಹಿತರೇ! ಪ್ರೀತಿಯ ಗೆಳೆಯ / ಗೆಳತಿಯರೇ ಸ್ನೇಹದಿನದ ಹಾರ್ಧಿಕ ಶುಭಾಶಯಗಳೊಂದಿಗೆ ಭವಿಷ್ಯದಲ್ಲಿ ಉತ್ತಮ ಸ್ನೇಹಿತರನ್ನು ಸಂಪಾದಿಸಿ ಆದರ್ಶ ಪಥದಲ್ಲಿ ನೀವೆಲ್ಲರೂ ಮುನ್ನೆಡೆಯಿರಿ.

✍️ಬರಹ : ಲತಾಶ್ರೀ ಸುಪ್ರೀತ್ ಮೋಂಟಡ್ಕ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!