ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಭಾರೀ ಹಾನಿಯಾಗುತ್ತಿರುವ ಘಟನೆಗಳು ಮುಂದುವರಿದಿವೆ.ಆರೋಗ್ಯ ಇಲಾಖೆಯಿಂದ ಮನೆ ಭೇಟಿ ಹಾಗೂ ಸ್ವಯಂ ಸೇವಕರಿಂದ ಶ್ರಮಸೇವೆ ನಡೆಯುತ್ತಿದೆ.
ಭಾರೀ ಮಳೆಯಿಂದಾಗಿ ಸಂಪರ್ಕ ಕಡಿತಗೊಂಡಿರುವ ನಾಲ್ಕು ಗ್ರಾಮಗಳಲ್ಲಿ ಸಿಲುಕಿರುವ ಮನೆಗಳಿಗೆ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಸಂತ್ರಸ್ತರ, ವೃದ್ಧರ, ಗರ್ಭಿಣಿಯರ ಆರೋಗ್ಯ ವಿಚಾರಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಮಳೆಯಿಂದಾಗಿ ನಲುಗಿ ಹೋಗಿರುವ ಇಲ್ಲಿನ ನಾಲ್ಕು ಗ್ರಾಮಗಳಲ್ಲಿ ಸ್ಥಳೀಯರ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಹೊರಗಿನ ಜನರು ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಹಿಂದೂ ಸಂಘಟನೆಗಳ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಶ್ರಮಸೇವೆ ಮಾಡುತ್ತಿದ್ದಾರೆ. ನೀರು ನುಗ್ಗಿ ಕೆಸರು ತುಂಬಿಕೊಂಡಿರುವ ಮನೆಗಳ ಸ್ವಚ್ಚತೆ, ಮಣ್ಣು ತೆರವು, ಸಂಪರ್ಕ ಕಲ್ಪಿಸುವಿಕೆ, ಆಹಾರ ಪೂರೈಕೆ, ಜನರ ಸ್ಥಳಾಂತರಕ್ಕೆ ವಿವಿಧ ಇಲಾಖೆಗಳ ಜೊತೆಗೆ ಜನರು ಕೈ ಜೋಡಿಸುತ್ತಿದ್ದಾರೆ.
ಮಳೆ ಹಾನಿಯಿಂದಾಗಿ ಪ್ರತೀ ಗ್ರಾಮಗಳ ಹಲವಾರು ಜನರು ತಮ್ಮ ಮನೆ, ದನ-ಕರು, ಸಾಕು ಪ್ರಾಣಿಗಳನ್ನು, ಕೃಷಿ ತೋಟಗಳನ್ನು ಕಳೆದುಕೊಂಡಿದ್ದು, ಪ್ರಕೃತಿ ವಿಕೋಪ ಇಲ್ಲಿನ ಜನರ ಬದುಕನ್ನು ಕಸಿದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು.
✒️ಉಲ್ಲಾಸ್ ಕಜ್ಜೋಡಿ