Ad Widget

ಸುಬ್ರಹ್ಮಣ್ಯ: ಚಿಕ್ಕ ಮಗುವನ್ನು ರಕ್ಷಿಸಿದ ಅಜ್ಜಿ – ಇನ್ನಿಬ್ಬರು ಮಕ್ಕಳು ಗುಡ್ಡ ಕುಸಿತಕ್ಕೆ ಬಲಿ

ಸುಬ್ರಹ್ಮಣ್ಯದಲ್ಲಿ ಆ.1 ರಂದು ಸಂಜೆಯಿಂದ ಸುರಿದ ಮಳೆಯಿಂದ ಕುಮಾರಧಾರ ಸಮೀಪದ ಏನೆಕಲ್ಲು ತೆರಳುವ ರಸ್ತೆಯ ಪರ್ವತಮುಖಿ ಎಂಬಲ್ಲಿ ಗುಡ್ಡ ಜರಿದು ಮನೆ ಕುಸಿತವಾಗಿ ಇಬ್ಬರು ಬಾಲಕಿಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ರಾತ್ರಿ ಸುಮಾರು 7.30ರ ವೇಳೆಗೆ ಕುಸಿತ ಸಂಭವಿಸಿತ್ತು.

. . . . . .

ಮಣ್ಣಿನಡಿಗೆ ಇಬ್ಬರು ಮಕ್ಕಳು ಸಿಲುಕಿರುವುದು ಗೊತ್ತಾಗಿ ರಾತ್ರಿ 10.30ರ ವರೆಗೆ ಕಾರ್ಯಚರಣೆ ನಡೆಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹಗಳನ್ನು ಪತ್ತೆ ಮಾಡಿ ಹೊರತೆಗೆಯಲಾಯಿತು. ಕುಸುಮಾಧರ – ರೂಪಾಶ್ರೀ ದಂಪತಿಯ ಮಕ್ಕಳಾದ ಶೃತಿ (11) ಹಾಗೂ ಜ್ಞಾನ ಶ್ರೀ (6) ಮೃತ ಬಾಲಕಿಯರು. ಶ್ರುತಿ ಸುಬ್ರಹ್ಮಣ್ಯದ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಹಾಗೂ ಜ್ಞಾನಶ್ರೀ ಕುಮಾರಸ್ವಾಮಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದರು. ಕುಸುಮಾಧರರವರು ಮೂಲತ ಪಂಜ ಸಮೀಪದ ಕರಿಮಜಲಿನವರು. ಅವರು ಪರ್ವತಮುಖಿಯಲ್ಲಿ ಸಣ್ಣ ಮನೆ ಹೊಂದಿದ್ದು, ಮನೆಯಿಂದ 300 ಮೀಟರ್ ದೂರದಲ್ಲಿ ಬಸ್ ನಿಲ್ದಾಣದ ಕಟ್ಟಡದಲ್ಲಿ ಕುಸುಮಾಧರ ಅವರ ಅಂಗಡಿಯಿದೆ.

ಈ ದಂಪತಿಗೆ ಮೂವರು ಹೆಣ್ಣುಮಕ್ಕಳು. ದಂಪತಿಗಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಂಗಡಿಯಲ್ಲಿದ್ದು ರಾತ್ರಿ 10 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆಗೆ ಬರುತ್ತಿದ್ದರು. ಹೀಗಾಗಿ ಮೂವರು ಮಕ್ಕಳು ಅಜ್ಜಿ ಜತೆಯೇ ಇರುತ್ತಿದ್ದರು. ಆ.1 ಸಂಜೆ 7.30 ರ ಸುಮಾರಿಗೆ ಶೃತಿ ಹಾಗೂ ಜ್ಞಾನಶ್ರಿ ಹೊರಗೆ ಆಟವಾಡುತ್ತಿದ್ದರು. ಅಜ್ಜಿ ಮತ್ತು ಒಂದು ವರ್ಷದ ಮಗು ಮನೆಯೊಳಗಿದ್ದರು. ಗುಡ್ಡ ಕುಸಿತವಾಗುತ್ತಲೇ ಅಜ್ಜಿ ತನ್ನ ಜತೆಯಿದ್ದ ಒಂದು ವರ್ಷದ ಮಗುವಿನೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದರು. ಆದರೇ ಇದೇ ವೇಳೆ ಮನೆ ಹೊರಗೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಶೃತಿ ಹಾಗೂ ಜ್ಞಾನಶ್ರಿ ಗುಡ್ಡ ಕುಸಿತದ ಶಬ್ದ ಕೇಳಿ ಭಯದಿಂದ ಮನೆಯೊಳಗೆ ಓಡಿದ್ದಾರೆ. ಈ ಇಬ್ಬರು ಮಕ್ಕಳು ಮನೆಯೊಳಗೆ ಓಡುತ್ತಲೇ ಮನೆ ಸಂಪೂರ್ಣ ನೆಲಸಮಗೊಂಡು ಮನೆಯೊಳಗೆಸಿಲುಕಿಕೊಂಡರು. ವಿಷಯ ತಿಳಿದು ತಂದೆ ಹಾಗೂ ತಾಯಿ ಅಂಗಡಿಯಿಂದ ಮನೆಗೆ ಬರುವ ವೇಳೆಗೆ ಗುಡ್ಡ ಮನೆ ಮೇಲೆ ಸಂಪೂರ್ಣ ಕುಸಿದು ಬಿದ್ದಿತ್ತು ಎನ್ನಲಾಗಿದೆ.

ಈ ಪ್ರದೇಶ ಜಲಾವೃತಗೊಂಡು ಹಾಗೂ ಮರ ಬಿದ್ದು ಹಾಗೂ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿ ಪಂಜ ಸುಬ್ರಹ್ಮಣ್ಯ ರಸ್ತೆ ಹಾಗೂ ಈ ಪ್ರದೇಶವನ್ನು ಸಂಪರ್ಕಿಸುವ ಇನ್ನಿತರ ರಸ್ತೆಗಳು ಸಂಪರ್ಕ ಕಡಿತಗೊಂಡಿದ್ದರಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ವಿದ್ಯುತ್ ಸಂಪರ್ಕ ಕಡಿತದಿಂದ ಪ್ರದೇಶದಲ್ಲಿ ಸಂಪೂರ್ಣ ಕತ್ತಲಾವರಿಸಿತ್ತು. ನೀರಿನ ಹರಿವು ಕಡಿಮೆಯಾದ ಬಳಿಕ ಜೆಸಿಬಿ ತರಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಿ ಮಣ್ಣನ್ನು ಸರಿಸುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದರು .

ಬಳಿಕ ಎನ್‌ಡಿಆರ್‌ಎಫ್ ತಂಡದವರೂ ಸ್ಥಳಕ್ಕೆ ತಲುಪಿದ್ದು, ಕಾರ್ಯಾಚರಣೆ ಮುಂದುವರಿಸಿದ್ದು, ತಡರಾತ್ರಿ 10.30ರ ಸುಮಾರಿಗೆ ಮೃತದೇಹ ಪತ್ತೆಯಾಯಿತು.ಇಬ್ಬರ ಮೃತದೇಹವು ಮನೆಯ ಮೂಲೆಯಲ್ಲಿ ಪತ್ತೆಯಾಗಿದ್ದು, ಕೈ ಕೈ ಹಿಡಿದ ಹಿಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಭಯದಿಂದ ಅಡಗಿ ಕುಳಿತ ವೇಳೆ ಅವರ ಮೇಲೆ ಮನೆ ಕುಸಿದಿರಬಹುದು ಎಂದು ಶಂಕಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!