ರಾಷ್ಟ್ರಪತಿ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿ ಆಯ್ಕೆಯಾಗುವವರೆಗೆ ಈಕೆಯನ್ನು ಹೆಚ್ವಿನವರಿಗೆ ಗೊತ್ತಿರಲಿಲ್ಲ. ಪ್ರಚಾರದಲ್ಲಿರದ ವ್ಯಕ್ತಿಯನ್ನು ಎನ್.ಡಿ.ಎ. ಆಯ್ಕೆ ಮಾಡಿದಾಗ ಎಲ್ಲರ ಮನದಲ್ಲಿ ಯಾರು ಈ ದ್ರೌಪದಿ ಮುರ್ಮು ಎಂದು ಹುಬ್ಬೇರಿಸುವಂತೆ ಮಾಡಿತ್ತು. ಈಗ ರಾಷ್ಟ್ರಪತಿ ಚುನಾವಣೆಯಲ್ಲಿ ಶೇ. 64 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇವರು ಬಡತನದಿಂದ ಮೇಲೆದ್ದು ಬಂದವರು, ಬುಡಕಟ್ಟು ಜನಾಂಗದ ಸಾಮಾನ್ಯ ಕುಟುಂಬದ ಮಹಿಳೆ, ನಿಸ್ವಾರ್ಥ ಸಮಾಜ ಸೇವಕಿಯಾಗಿ, ಜತೆಗೆ ಆಧ್ಯಾತ್ಮಿಕ ಬೆಳೆಸಿಕೊಂಡು ಸಾಧಿಸಿದ ಛಲಗಾರ್ತಿ,ಎಲ್ಲರಿಗೂ ಇವರ ಜೀವನ ಆದರ್ಶವಾಗಿದೆ.
ಇವರ ಆಯ್ಕೆ ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಸುಂದರ ಕಿರೀಟ. ಭಾರತದಂತಹ ರಾಷ್ಟ್ರದ ಅಧ್ಯಕ್ಷೀಯ ಸ್ಥಾನಕ್ಕೆ ಅವರ ಉಮೇದುವಾರಿಕೆಯನ್ನು ಘೋಷಿಸುವವರೆಗೂ ಅವರ ಹೆಸರು ತಿಳಿದಿರಲಿಲ್ಲ. ದ್ರೌಪದಿ ಮುರ್ಮ್ ಅವರ ಜೀವನ ಹೋರಾಟವು ವಿಶೇಷವಾಗಿ ಭಾವನಾತ್ಮಕ ಮತ್ತು ಎಲ್ಲಾ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ. ದುರಹಂಕಾರ ಇಲ್ಲದೆ ಸಾಮಾನ್ಯರೊಂದಿಗೆ ಜೀವಿಸಿದ್ದಾರೆ. ಜೂನ್ 20, 1958 ರಂದು ಒರಿಸ್ಸಾ ರಾಜ್ಯದ ಮಯೂರ್ಭಂಜ್ ಜಿಲ್ಲೆಯ ಅತ್ಯಂತ ಸಾಮಾನ್ಯ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಅವರು 1979 ರಲ್ಲಿ ಪದವಿ ಪಡೆದರು. ಒರಿಸ್ಸಾ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಗುಮಾಸ್ತರಾದರು, ನಂತರ ಶಿಕ್ಷಕಿ ಸೇವೆ ಸಲ್ಲಿಸಿದರು.
ನಗರ ಸೇವಕಿಯಾಗಿ, ನಂತರ ಶಾಸಕಿಯಾಗಿ ಮಂತ್ರಿಯೂ ಆದರು. ಜಾರ್ಖಂಡ್ ನ ರಾಜ್ಯಪಾಲರಾದರು. ಅವರ ಗಂಡನ ಹೆಸರು ಶಾಮ್ ಚರಣ್ ಮುರ್ಮು. ಅವರು ಈಗಲೂ ಮಯೂರ್‌ಭಂಜ್‌ನಲ್ಲಿರುವ ಎರಡು ಅಂತಸ್ತಿನ ಸಾಧಾರಣ ಮನೆಯಲ್ಲಿ ವಾಸಿಸುತ್ತಿದ್ದಾರೆ. 64 ವರ್ಷದ ದ್ರೌಪದಿ ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್ ಆಗಿದ್ದರು. ದಲಿತರು, ಆದಿವಾಸಿಗಳು ಮತ್ತು ಮಕ್ಕಳ ಅಭ್ಯುದಯಕ್ಕಾಗಿ ಹೋರಾಡಿದ ದ್ರೌಪದಿ ಮುರ್ಮು ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಬಿಕ್ಕಟ್ಟುಗಳಿಂದ ಅಕ್ಷರಶಃ ನೊಂದಿದ್ದರು. ಇಂತಹ ಕಠಿಣ ಪರಿಸ್ಥಿತಿಯಿಂದ ನೊಂದ ಅವರು ಧೈರ್ಯದಿಂದ ಎದುರಿಸಿದರು.ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣುಮಗಳು ಇದ್ದರು. 2009 ರಲ್ಲಿ 25 ವರ್ಷದ ಮಗ ತೀರಿಹೋದರು. ಅವರಿಗೆ ಈ ಆಘಾತವನ್ನು ಸಹಿಸಲಾಗಲಿಲ್ಲ ಅವರು ಖಿನ್ನತೆಗೆ ಒಳಗಾದರು. ಬದುಕಿನ ಆಸಕ್ತಿಗಳೆಲ್ಲ ಮಾಯವಾಗಿ, ದುಃಖದಿಂದ ನೊಂದು, ಅದೇ ಸಮಯಕ್ಕೆ ಪ್ರಜಾಪಿತಾ ಬ್ರಹ್ಮಕುಮಾರಿ ಎಂಬ ಆಧ್ಯಾತ್ಮಿಕ ಸಂಸ್ಥೆಗೆ ಹೋದರು. ಆ ಆಧ್ಯಾತ್ಮಿಕತೆಗೆ ಶರಣಾದರು, ಮತ್ತೆ ಎರಡನೇ ಮಗ 2013ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿ. ಅದೇ ತಿಂಗಳಲ್ಲಿ ಆವರ ತಾಯಿ ತೀರಿಕೊಂಡಿದ್ದು, ಸಹೋದರನೂ ಸಾವನ್ನಪ್ಪಿದ್ದ. ಈ ನಾಲ್ಕು ವರ್ಷಗಳಲ್ಲಿ ಹತ್ತಿರದ ಸಂಬಂಧಿಕರನ್ನು ಕಳೆದುಕೊಂಡರು, ಮತ್ತು 2014 ರಲ್ಲಿ ಅವರ ಪತಿ ಶಾಮ್ ಚರಣ್ ನಿಧನರಾದರು, ಅವರು ಏಕಾಂಗಿಯಾಗಿದ್ದರು, ವಿಧಿ ಅವರಿಗೆ ಅನ್ಯಾಯ ಮಾಡಿತು. ಆದರೆ ಅಧ್ಯಾತ್ಮ ಅವರ ಜೊತೆಗಿತ್ತು. ದಲಿತರ, ಆದಿವಾಸಿಗಳ ಸೇವೆಯಲ್ಲಿ ಮಗ್ನರಾದರು. ತಮ್ಮ ದುಃಖವನ್ನು ಲೋಕದ ದುಃಖಗಳೊಂದಿಗೆ ಬೆರೆಸಿ ಮತ್ತೆ ಗಟ್ಟಿಯಾಗಿ ನಿಂತರು.
2015 ರಲ್ಲಿ, ಅವರು ಐದು ವರ್ಷಗಳ ಕಾಲ ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಅವರು ವಿನಮ್ರ ಸ್ವಭಾವದ ಕಟ್ಟುನಿಟ್ಟಾದ ಆಡಳಿತಗಾರರಾಗಿ ಹೆಸರಾದರು. ಅವರು 2021 ರವರೆಗೆ ರಾಜ್ಯಪಾಲರಾಗಿದ್ದರು. ಜೂನ್ 20 ರಂದು ಅವರ ಜನ್ಮದಿನವಾಗಿತ್ತು ಮತ್ತು ಜೂನ್ 21 ರಂದು ಭಾರತದ ರಾಷ್ಟ್ರಪತಿ ಹುದ್ದೆಗೆ ಅವರ ಹೆಸರನ್ನು ಘೋಷಿಸಲಾಯಿತು. ಇದು ಅವರಿಗೆ ಮತ್ತು ದೇಶಕ್ಕೆ ಆಶ್ಚರ್ಯಕರ ಸಂಗತಿಯಾಗಿತ್ತು, ಎಂದಿನಂತೆ ಶಿವನ ದೇವಸ್ಥಾನಕ್ಕೆ ಹೋದರು, ಸ್ವತಃ ಪೊರಕೆ ಹಿಡಿದು ದೇವಸ್ಥಾನವನ್ನು ಸ್ವಚ್ಛಗೊಳಿಸಿದರು. ದೇವಸ್ಥಾನದ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ್ದರು.