Ad Widget

ಸುಬ್ರಹ್ಮಣ್ಯ : ಸ್ವಾತಂತ್ರ್ಯೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ಅರಳಲಿದೆ ರಾಷ್ಟ್ರಧ್ವಜ

ಸ್ವಾತಂತ್ರ‍್ಯೋತ್ಸವದ ೭೫ ನೇ ವರ್ಷಾಚರಣೆಯ ಅಂಗವಾಗಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಹರ್ ಘರ್ ಝಂಡಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಗ್ರಾಮದಲ್ಲಿ ನಡೆಸುವುದು ನಮ್ಮ ಗುರಿಯಾಗಬೇಕು.ಗ್ರಾಮದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಅರಳಲು ಸರ್ವರ ಸಹಕಾರ ಅತ್ಯಗತ್ಯ. ೭೫ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಘರ್ ಘರ್ ಝಂಡಾ ಎಂಬ ಕಾರ್ಯಕ್ರಮವು ನೆರವೇರಲಿದೆ.ಈ ನಿಮಿತ್ತ ಸುಬ್ರಹ್ಮಣ್ಯ ಪಂಚಾಯತ್ ವ್ಯಾಪ್ತಿಯ ೨೮೦೦ ಮನೆಗಳು ಮತ್ತು ಅಂಗಡಿ, ಹೋಟೆಲ್ ಸೇರಿದಂತೆ ಒಟ್ಟು ೩೦೦೦ ಕಡೆಗಳಲ್ಲಿ ಏಕಕಾಲದಲ್ಲಿ ತ್ರಿವರ್ಣ ಧ್ವಜ ಅರಳಲಿದೆ ಎಂದು ಸುಬ್ರಹ್ಮಣ್ಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಹೇಳಿದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ಹರ್ ಘರ್ ಝಂಡಾ ಕಾರ್ಯಕ್ರಮದ ಅಂಗವಾಗಿ ಜು. 08 ರಂದು ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅಮೃತ ಮಹೋತ್ಸವದ ನಿಮಿತ್ತ ೭೫ ವಿಶೇಷ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಅಲ್ಲದೆ ಅನೇಕ ವಿಶೇಷ ಕಾರ್ಯಕ್ರಮಗಳು ಆ.೧೧ರಿಂದ ೧೫ರ ತನಕ ನಿರಂತರವಾಗಿ ನಡೆಯಲಿದೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮವನ್ನು ಅದ್ಬುತವಾಗಿ ಯಶಗೊಳಿಸಬಹುದು ಎಂದರು.

ಕಾರ್ಯಕ್ರಮದ ಅಂಗವಾಗಿ ಅಮೃತ ಸರೋವರ ಎಂಬ ವಿಶೇಷ ಕಾರ್ಯಕ್ರಮ ನೆರವೇರಲಿದೆ. ಇದರ ಅಡಿಯಲ್ಲಿ ಕುಲ್ಕುಂದ ಬಸವನಮೂಲೆಯ ಐತಿಹಾಸಿಕ ಶ್ರೀ ಬಸವೇಶ್ವರ ದೇವಳದ ಕೆರೆಯ ಅಭಿವೃದ್ಧಿಗೆ ಮತ್ತು ಯೇನೆಕಲ್ಲಿನ ಐತಿಹಾಸಿಕ ಅಂಗಾರ ವರ್ಮ ಕೆರೆಯ ಅಭಿವೃದ್ಧಿಗೆ ಶಂಕುಸ್ಥಾಪನೆ ನಡೆಯಲಿದೆ.ಅಲ್ಲದೆ ನೀರ ಕಣಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಆ.೧೪ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಗ್ರಾಮ ಪಂಚಾಯತ್, ಸಂಘ ಸಂಸ್ಥೆಗಳು, ಸಾರ್ವಜನಿಕರು, ಶಾಲಾ ಕಾಲೇಜುಗಳ ಸಮ್ಮಿಲನದಲ್ಲಿ ಬೃಹತ್ ಕುಕ್ಕೆ ಕ್ಷೇತ್ರ ಸ್ವಚ್ಚತಾ ಕಾರ್ಯಾಗಾರ ನಡೆಯಲಿದೆ.ಅಲ್ಲದೆ ನಿವೃತ್ತ ಯೋಧರಿಗೆ ಗೌರವಾರ್ಪಣೆ,ಇತರ ಸಾಧಕರನ್ನು ಗುರುತಿಸುವಿಕೆ ನೆರವೇರಲಿದೆ. ಅಲ್ಲದೆ ಪ್ರತಿ ಅಂಗಡಿ ಮತ್ತು ಹೋಟೇಲ್‌ಗಳಿಗೆ ಉಚಿತವಾಗಿ ಪ್ಯಾಬ್ರಿಕೇಟೆಡ್ ಡಸ್ಟ್ ಬಿನ್ ಹಾಗೂ ಪ್ರತಿಮನೆಗೆ ಕಸ ಹಾಕುವ ಚೀಲವನ್ನು ಉಚಿತವಾಗಿ ನೀಡುವ ಕಾರ್ಯವೂ ಆರಂಭಗೊಳ್ಳಲಿದೆ ಎಂದು ಯು.ಡಿ.ಶೇಖರ್ ಹೇಳಿದರು. ಪಂಚಾಯತ್‌ನಿಂದ ಪ್ರತಿ ಮನೆಗೂ ನಿಗದಿತ ದರದೊಂದಿಗೆ ತ್ರಿವರ್ಣ ಧ್ವಜ ನೀಡುವುದು. ಅಲ್ಲದೆ ವಾರ್ಡ್ನ ಪಂಚಾಯತ್ ಸದಸ್ಯರಿಗೆ ಪ್ರತಿ ವಾರ್ಡ್ನ ಜವಬ್ದಾರಿ ನೀಡಲಾಯಿತು. ಪ್ರತಿ ೧೦ ಮನೆಗೆ ಓರ್ವ ಪ್ರತಿನಿಧಿಯನ್ನು ನೇಮಿಸಿ ಅವರು ಮನೆಯವರಿಗೆ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ತಿಳುವಳಿಕೆ ಮತ್ತು ತರಬೇತಿ ನೀಡುವುದು ಎಂದು ನಿರ್ಧರಿಸಲಾಯಿತು. ಅಲ್ಲದೆ ಜನತೆಯ ಜಾಗೃತಿಗಾಗಿ ಬಿತ್ತಿ ಪತ್ರ ನೀಡಿಕೆ ಮತ್ತು ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲು ನಿರ್ಣಯಿಸಲಾಯಿತು. ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗಾಗಿ ಅಮೃತ ಮಹೋತ್ಸವ ಸಮಿತಿ ರಚಿಸಲಾಯಿತು.

ಅಲ್ಲದೆ ಪ್ರತಿ ವಾರ್ಡ್ಗೆ ಒಂದು ಸಮಿತಿ ರಚಿಸಲು ನಿರ್ಧರಿಸಲಾಯಿತು. ಕಾರ್ಯಕ್ರಮದ ಪ್ರಧಾನ ನಿರ್ವಾಹಕರಾಗಿ ವಿಶ್ವನಾಥ ನಡುತೋಟ ಮತ್ತು ಪತ್ರಕರ್ತರ ಸಂಘದ ಕಾರ್ಯದರ್ಶಿ ಉಪನ್ಯಾಸಕ ರತ್ನಾಕರ.ಎಸ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಉಪಾಧ್ಯಕ್ಷ ಸವಿತಾ ಭಟ್ ವಹಿಸಿದ್ದರು. ಪಂಚಾಯತ್ ಪಿಡಿಓ ಯು.ಡಿ.ಶೇಖರ್, ಕಾರ್ಯದರ್ಶಿ ಮೋನಪ್ಪ.ಡಿ, ನಿವೃತ್ತ ಉಪನ್ಯಾಸಕ ಮತ್ತು ಸೀನಿಯರ್ ಛೇಂಬರ್ ಅಧ್ಯಕ್ಷ ವಿಶ್ವನಾಥ ನಡುತೋಟ, ರೋಟರಿ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು, ಕಾರ್ಯದರ್ಶಿ ರವಿ ಕಕ್ಕೆಪದವು, ಜೇಸಿಸ್ ಅಧ್ಯಕ್ಷ ದೀಪಕ್ ನಂಬಿಯಾರ್, ಯೇನೆಕಲ್ಲು ಸಹಕಾರಿ ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ವೇದಿಕೆಯಲ್ಲಿದ್ದರು.

ಪಂಚಾಯತ್ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು, ಶಾಲಾ ಮುಖ್ಯಗುರುಗಳು, ಎಸ್‌ಡಿಎಂಸಿ ಪದಾಧಿಕಾರಿಗಳು,ಸ್ವಸಹಾಯ ಸಂಘದ ಪ್ರಮುಖರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!