ಕುಕ್ಕೆಶ್ರೀ ಸುಬ್ರಹ್ಮಣ್ಯ ಸಮೀಪದ ಇಂಜಾಡಿಯ ಬೆಳ್ಳಿ ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್ ನ ಬಳಿಯಲ್ಲಿರುವ ಮುಂಡೋಡಿ ಮನೆತನದವರ ಜಾಗದಲ್ಲಿ ಬಾವಿ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ನೀರು ಸಿಕ್ಕಾಗ ತೆಂಗಿನ ಕಾಯಿ ಒಡೆಯುವ ಕ್ರಮಕ್ಕಾಗಿ ವೀಳ್ಯದೆಲೆ, ಅಡಿಕೆ, ತುಂಬೆ ಹೂ, ಕಾಡು ಕೇಪುಲ ಹೂ, ಬೆಳ್ತಿಗೆ ಅಕ್ಕಿಯೊಂದಿಗೆ ದಾನ ಬಿಡುವುದಕ್ಕಾಗಿ ಬಾಳೆ ಎಲೆಯ ಅಗತ್ಯವಿರುತ್ತದೆ. ಹಾಗಾಗಿ ಬಾಳೆ ಎಲೆಗಾಗಿ ಪಕ್ಕದ ತೋಟಕ್ಕೆ ಹೋಗುವ ದಾರಿಮಧ್ಯೆ ಗಿಡಗುಂಟೆಗಳಿಂದ ತುಂಬಿದ ಬಲ್ಲೆ ಅಲ್ಲಾಡುವುದು ಕಂಡು ಏನೆಂದು ನೋಡಲು, ಆ ಬಲ್ಲೆಯ ನಡುವಿರುವ ಯಾರಿಗೂ ಕಾಣದ 5-6 ಅಡಿ ಆಳದ ಹೊಂಡವಿದ್ದು ಅದರಲ್ಲಿ ಗಂಡು ಕರು ಬಿದ್ದಿದ್ದು, ಮೇಲೆ ಬರಲು ಪ್ರಯತ್ನಿಸಿ ಕಂಗಳಾಗಿ ನಿಂತಿತ್ತು. ಅದು ಅದರ ಆಕಾರಕ್ಕೆ ಇಕ್ಕಟ್ಟಾದ ಹೊಂಡವಾದ ಕಾರಣ ಮಲಗಲು, ಆ ಕಡೆ ಈ ಕಡೆ ತಿರುಗಾಡಲು ಸಾಧ್ಯವಾಗದೆ ಅಸಹಾಯಕ ನಿಂತ ಸ್ಥಿತಿಯಲ್ಲಿತ್ತು. ಎರಡು ಮೂರು ದಿನದಿಂದ ಮಳೆಯ ನೀರನ್ನು ಕುಡಿದು ಸ್ವಲ್ಪ ತನ್ನ ಹಸಿವು ದಾಹ ನೀಗಿಸಿಕೊಂಡಿರಬೇಕು ಅನ್ನುತ್ತಾರೆ ಅದರ ರಕ್ಷಕರು. ಬಾವಿ ಕೆಲಸದ ತಂಡದವರಾದ ಪರ್ವತಮುಖಿಯ ವಾಸುದೇವ,ದಯಾನಂದ, ಹೇಮಂತ ಎನ್., ಹೇಮಂತ ಪಿ., ಬಾಬು ಪಿ., ನಂದನ್ ಇವರ ಸಹಾಯದೊಂದಿಗೆ ಕರುವನ್ನು ಹಗ್ಗದ ಮುಖಾಂತರ ಮೇಲೆ ಎತ್ತಲಾಯಿತು.
ಇದೇ ಹೊಂಡದಿಂದ (ಇಂಜಾಡಿ ಡಾಬಾದ ಹಿಂಬದಿ) 10feet ಅಂತರದಲ್ಲಿ ಗಿಡ ಗುಂಟೆಗಳಿಂದ ತುಂಬಿರುವ ಕಟ್ಟೆಯಿಲ್ಲದ ಬಾವಿಯೊಂದು ಇದ್ದು ಅಪಾಯವುಂಟು ಮಾಡುವ ಸ್ಥಿತಿಯಲ್ಲಿದೆ. ಸಂಬಂಧಪಟ್ಟವರು ಮುಂದಿನ ದುರ್ಘಟನೆಗಳು ಸಂಭವಿಸುವುದಕ್ಕೆ ಮುಂಚೆ ಸೂಕ್ತ ಕ್ರಮ ಕೈಗೊಂಡರೆ ಮುಂದೆ ನಡೆಯಲಿರುವ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.