ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ನಿಂದನೆ ಮಾಡಿದ ಪ್ರಕರಣದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ ರೈ ಅವರಿಗೆ ಸುಳ್ಯ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ತೀರ್ಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸರಕಾರಿ ಅಧಿಕಾರಿಗಳು, ಸಾರ್ವಜನಿಕ ಸೇವೆಯಲ್ಲಿರುವವರನ್ನು ಪ್ರಶ್ನೆ ಮಾಡುವುದು ಅಪರಾಧವಲ್ಲ ಎಂಬ ಕಕ್ಷಿದಾರರ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ತೀರ್ಪಿಗೆ ತಡೆ ನೀಡಿದೆ. ಸಾಯಿ ಗಿರಿಧರ್ ರೈ ಅವರ ಪರ ನ್ಯಾಯವಾದಿ ಬಿ. ನರಸಿಂಹ ಪ್ರಸಾದ್ ವಾದ ಮಂಡಿಸಿದ್ದರು.
ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಹಿನ್ನೆಲೆಯಲ್ಲಿ ಗಿರಿಧರ ರೈ ಅವರು 2016ರ ಫೆ.28ರಂದು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆತ್ತಿಕೊಂಡಿದ್ದರು. ಈ ಸಂದರ್ಭ ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದರು ಎಂದು ಆಪಾದಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಸಚಿವರ ಪರವಾಗಿ ಮೆಸ್ಕಾಂ ಅಧಿಕಾರಿಗಳು ದೂರು ನೀಡಿದ್ದರು.
ನಿಂದನೆ, ಜೀವ ಬೆದರಿಕೆ, ಮಾನಹಾನಿ, ಕರ್ತವ್ಯಕ್ಕೆ ಅಡ್ಡಿ ಎಂಬ 4 ಪ್ರಕರಣಗಳಲ್ಲಿ ಕೇಸು ದಾಖಲಿಸಿಕೊಂಡು ರೈ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು, ಕಳೆದ ಅಕ್ಟೋಬರ್‍ನಲ್ಲಿ ಸ್ವತಃ ಶಿವಕುಮಾರ್ ಸುಳ್ಯಕ್ಕೆ ಬಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. ಎ.18ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ ಸಾಯಿ ಗಿರಿಧರ್ ರೈ ಅವರಿಗೆ 4 ಪ್ರಕರಣಗಳಲ್ಲಿ ತಲಾ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದು, ಎಲ್ಲವನ್ನು ಏಕಕಾಲದಲ್ಲಿ ಅನುಭವಿಸುವಂತೆ ಸೂಚಿಸಿತ್ತು. ಈ ತೀರ್ಪಿನ ವಿರುದ್ಧ ಸಾಯಿ ಗಿರಿಧರ ರೈ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.