ಸುಳ್ಯದ ಹಳೆಗೇಟಿನಲ್ಲಿ ವೇದಮೂರ್ತಿ ನಾಗರಾಜ್ ಭಟ್ ಸಾರಥ್ಯದ ಶ್ರೀ ಕೇಶವ ಕೃಪಾ ವೇದ,ಯೋಗ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ವೇದ,ಯೋಗ ಮತ್ತು ಕಲಾ ಶಿಬಿರದ ಉದ್ಘಾಟನಾ ಸಮಾರಂಭ ಇಂದು ಕೇಶವ ಕಿರಣ ಛಾತ್ರಾ ನಿವಾಸದಲ್ಲಿ ನಡೆಯಿತು. ಶಿಬಿರವನ್ನ ಮೈಸೂರಿನ ಖ್ಯಾತ ನರರೋಗ ತಜ್ಞ ಮತ್ತು ಕೇಶವ ಕೃಪಾದ ಹಿರಿಯ ವಿದ್ಯಾರ್ಥಿ ಡಾ. ಶಾಸ್ತಾರ ಪನೆಯಾಲ ಉದ್ಘಾಟಿಸಿ ಮಾತನಾಡಿದರು. ವೇದ ಎಂದರೆ ಜ್ಞಾನ, ವೇದ ಎಂಬುದು ನಮ್ಮ ಬದುಕಿನ ಬುನಾದಿ ಕೇಶವ ಕೃಪಾ ವೇದ ಶಿಬಿರದ ಜ್ಞಾನ ತುಂಬುವ ಕೇಂದ್ರವಾಗಿದೆ. ಜೀವನ ಶೈಲಿಯ ಶಿಬಿರ ಇದು, ಸಮ್ಮರ್ ಕ್ಯಾಂಪ್ ಅಲ್ಲ ಇಲ್ಲಿ ಸಿಗುವ ಆನಂದ ಪರಮಾನಂದ ಎಂದರು. ಮೀಸಲಾತಿ ಮಿಳಿತವಾಗಿರುವ ಈ ಯುಗದಲ್ಲಿ ಮೀಸಲಾತಿ ಇಲ್ಲದೆ ಗೆದ್ದು ಬರುವುದು ಅಪೂರ್ವ ಸಾಧನೆ. ಇದನ್ನು ನಾವೆಲ್ಲ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು . ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು.
ಪುತ್ತೂರು ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿನಾಯಕ ಭಟ್ ದಿಕ್ಸೂಚಿ ಮಾತುಗಳನ್ನಾಡಿ ಭಾರತೀಯ ಸನಾತನ ಸಂಸ್ಕೃತಿ , ಭಾರತೀಯತೆ ಉಳಿಯಬೇಕಾದರೆ ವೇದಗಳ ಅಧ್ಯಯನ ನಡೆಸಬೇಕು. ಆ ಮೂಲಕ ನಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ. ಬ್ರಾಹ್ಮಣ್ಯ ಎಂಬುದು ನಮ್ಮ ಜೀನ್ಸ್ ನಿಂದ ಬರುವಂತದಲ್ಲ ಅದು ಜ್ಞಾನದ, ವೇದದ ಅಧ್ಯಯನದಿಂದ ಪಡೆದುಕೊಳ್ಳುವಂತದ್ದು ಇದಕ್ಕೆ ವಿಶ್ವಾಮಿತ್ರ ಉದಾಹರಣೆ ಕ್ಷತ್ರಿಯನಾದರೂ ಬ್ರಾಹ್ಮಣ್ಯದಿಂದ ದೇವರನ್ನು ಒಲಿಸಿಕೊಂಡವರು. ಈ ರೀತಿಯ ವಿದ್ಯೆಯನ್ನು ನಿರಂತರ 22 ವರ್ಷದಿಂದ ಧಾರೆ ಎರೆಯುತ್ತಿರುವ ನಾಗರಾಜ್ ಭಟ್ ಅವರ ಯೋಚನೆ ಬರೀ ಆಲೋಚನೆಯಲ್ಲ ಅದು ಒಂದು ತಪಸ್ಸು ಎಂದರು. ವೇದಿಕೆಯಲ್ಲಿ ಪುರೋಹಿತ ನಾಗರಾಜ್ ಭಟ್, ಛಾತ್ರ ನಿವಾಸದ ಅಧ್ಯಕ್ಷ ಶಂಕರ್ ಭಟ್ ಪುತ್ತೂರು, ಶ್ರೀಮತಿ ಸೀಮಾ ಶಾಸ್ತಾರ, ಶ್ರೀ ಕೇಶವ ಕೃಪಾ ವೇದ ಶಿಬಿರದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್, ಹವ್ಯಕ ಸುಳ್ಯ ವಲಯದ ಅಧ್ಯಕ್ಷ ವಿಷ್ಣುಕಿರಣ ನೀರಬಿದಿರೆ ಮೊದಲಾವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತಾ ಪ್ರಮುಖ್ ನಾ. ನಾಗರಾಜ್ ಜೀ ವೈಯುಕ್ತಿಕ ಗೀತೆಯನ್ನು ಹಾಡಿದರು. ವೈದಿಕ ಪ್ರಾರ್ಥನೆಯನ್ನು ವೇದ ಮೂರ್ತಿ ಸುದರ್ಶನ್ ಭಟ್ ಮತ್ತು ಅವರ ಬಳಗ ನಡೆಸಿಕೊಟ್ಟರು. ಶ್ರೀ ಕೇಶವ ಕೃಪಾ ವೇದ ಶಿಬಿರದ ಹಿರಿಯ ವಿದ್ಯಾರ್ಥಿ ಅಭಿರಾಮ್ ಭಟ್ ಸ್ವಾಗತಿಸಿ, ಶ್ರೀ ವತ್ಸ ಭಾರದ್ವಾಜ್ ವಂದಿಸಿದರು, ಶ್ರೀ ಹರಿ ಶರ್ಮ ಪಾದೆಕಲ್ಲು ಕಾರ್ಯಕ್ರಮ ನಿರೂಪಿಸಿದರು.