Ad Widget

ಸುಟ್ಟತ್ ಮಲೆ : ಅಕ್ರಮ ಹರಳುಕಲ್ಲು ಗಣಿಕಾರಿಕೆ ಸ್ಥಳಕ್ಕೆ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷರ ಭೇಟಿ

ಸುಬ್ರಹ್ಮಣ್ಯ ಸಮೀಪದ ಸುಟ್ಟತ್ ಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಹರಳು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಸುಟ್ಟತ್ ಮಲೆ ಮತ್ತಿತರ ಕೆಲ ಕಡೆ ಹರಳುಕಲ್ಲು ಅಗೆತ
ಮತ್ತು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಕೂಡಾ ಕಾಡಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ಇದೀಗ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷರು ಭೇಟಿ ನೀಡಿದ್ದಾರೆ.

. . . . .


ಹರಳು ಕಲ್ಲು ಅಗೆದು ಆ ಸ್ಥಳದ ಮೇಲೆ ಅಡ್ಡಗಳನ್ನು ಹಾಕಿ ಮುಚ್ಚಿರುವುದು ಈ ಸಂದರ್ಭ ರವಿ ಕುಶಾಲಪ್ಪ ಅವರ ಗಮನಕ್ಕೆ ಬಂತೆಂದು ತಿಳಿದು ಬಂದಿದೆ. ಅರಣ್ಯ ಇಲಾಖೆಯವರಲ್ಲಿ ಸಮನ್ವಯದ ಕೊರತೆ ಇದ್ದು, ಅದು ಈ ಎಲ್ಲಾ ದಂಧೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ಅವರು ಅಭಿಪ್ರಾಯ ಪಟ್ಟರೆಂದು ತಿಳಿದುಬಂದಿದೆ. ಸುಟ್ಟತ್ ಮಲೆ, ಕಡಮಕಲ್ಲು ಮುಂತಾದ ಸ್ಥಳಗಳಲ್ಲಿ ಯಾವ ಯಾವ ಸ್ಥಳ ದ.ಕ ಜಿಲ್ಲಾ ಅರಣ್ಯ ವ್ಯಾಪ್ತಿಯಲ್ಲಿ‌ ಬರುವುದೋ ಅಥವಾ ಕೊಡಗು ಜಿಲ್ಲಾ ಅರಣ್ಯ ವ್ಯಾಪ್ತಿಗೆ ಬರುವುದೋ ಎಂಬ ಮಾಹಿತಿಗಳ ವ್ಯತ್ಯಾಸವಿದೆ. ಇವರೊಳಗೆ ಸಮನ್ವಯತೆ ಇಲ್ಲದೆ ಇರುವುದು ಅನ್ಯರು ಕಾಡು ಪ್ರವೇಶಿಸಲು ಅವಕಾಶವಾಗಿದೆ. ಕೊಡಗು ಭಾಗದಿಂದ ಬಂದು ಇಲ್ಲಿ ದಂಧೆಯಲ್ಲಿ ಭಾಗಿಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ ಇಲ್ಲಿ ಸಿಬ್ಬಂದಿಗಳ ಕೊರತೆಯೂ ಇದೆ. ಆಧುನಿಕ ಉಪಕರಣಗಳ ಕೊರತೆ ಇದೆ. ಅರಣ್ಯ ಇಲಾಖೆಯವರ ಶೆಡ್‌ಗಳಿಗೆ ಮೂಲಭೂತ ವ್ಯವಸ್ಥೆಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟ ಅಧ್ಯಕ್ಷರು ಈ ಸಮಸ್ಯೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ಈ ಸಂದರ್ಭ ಅವರೊಂದಿಗೆ ವನ್ಯ ಜೀವಿ ಅಪರಾಧ ನಿಯಂತ್ರಣ ದಳದ ಭುವನೇಶ್ ಕೈಕಂಬ, ಸುಬ್ರಹ್ಮಣ್ಯ ಠಾಣೆಯ ಎ ಎಸ್ ಐ ಕರುಣಾಕರ, ಕಾನ್‌ಸ್ಟೇಬಲ್ ಬಸವರಾಜ್, ಅರಣ್ಯ ಇಲಾಖೆಯ ಉಪವಲಯ ಅರಣ್ಯಧಿಕಾರಿಗಳಾದ ಪ್ರಕಾಶ್, ರವಿಚಂದ್ರ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!