ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏ.2 ರಂದು ರಾಜ್ಯ ಧಾರ್ಮಿಕ ದಿನಾಚರಣೆ ಮತ್ತು ಯುಗಾದಿ ಆಚರಣೆ ನೆರವೇರಲಿದೆ. ಈ ಪ್ರಯುಕ್ತ ಮುಂಜಾನೆ 6 ಗಂಟೆಯಿಂದ ಶ್ರೀ ವಿದ್ಯಾಸಾಗರ ಭಜನಾ ಸಂಗಮ ಮತ್ತಿತರ ಸ್ವಯಂಸೇವಕ ತಂಡದವರಿದ ಶ್ರೀ ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ಅಹಃಪೂರ್ಣ ಭಜನಾ ಕಾರ್ಯಕ್ರಮ ನೆರವೇರಲಿದೆ.
ರಾಜ್ಯದ ಅಭಿವೃದ್ಧಿಗಾಗಿ ಪ್ರಾರ್ಥನೆ:
ಯುಗಾದಿಯ ಪುಣ್ಯದಿನ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಜನತೆಯ ಒಳಿತಿಗಾಗಿ ಕುಕ್ಕೆ ಶ್ರೀ ಶ್ರೀ ಸುಬ್ರಹ್ಮಣ್ಯ ದೇವರಿಗೆ ದೇವತಾ ಪ್ರಾರ್ಥನೆ ನೆರವೇರಲಿದೆ.ಅಲ್ಲದೆ ಶ್ರೀ ದೇವರಿಗೆ ವಿಶೇಷ ಪಂಚಾಮೃತ ಮಹಾಭಿಷೇಕ , ಹಾಲು ಪಾಯಸ ನೈವೇದ್ಯ ಮತ್ತು ಇತರ ಪರಿವಾರ ದೇವರುಗಳಿಗೆ ಅವಲಕ್ಕಿ ಪಂಚಕಜ್ಜಾಯ ಸಮರ್ಪಣೆ ಸಹಿತ ಮಂಗಳಾರತಿ ಸೇವೆ ನೆರವೇರಲಿದೆ.ಅಲ್ಲದೆ ಯುಗಾದಿ ವಿಶೇಷ ಪ್ರಯುಕ್ತ ಭಕ್ತಾದಿಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಬೇವು – ಬೆಲ್ಲ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಶ್ರೀ ದೇವಳದ ರಥಬೀದಿಯಲ್ಲಿ ಯಕ್ಷಶ್ರೀ ಹವ್ಯಾಸ ಬಳಗ ಪುತ್ತೂರು ಇವರಿಂದ ಕುಮಾರ ಸಂಭವ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಉತ್ಸವದ ಸಮಯದಲ್ಲಿ ಹೊಸ ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮ ನೆರವೇರಲಿದೆ.