ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ, ನಂಬಿದವರಿಗೆ ಇಂಬು ಕೊಡುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ “ಅಯ್ಯನಕಟ್ಟೆ ಜಾತ್ರೆ”ಯು ಜ.29ರಂದು ಕಳಂಜ ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ ಮಾರಿ ಹೊರಡುವ ಮೂಲಕ ಸಂಪನ್ನಗೊಂಡಿತು.
ಜ.26 ಬುಧವಾರದಂದು ಪ್ರತಿಷ್ಟಾ ವಾರ್ಷಿಕೋತ್ಸವದೊಂದಿಗೆ ಆರಂಭಗೊಂಡ ಜಾತ್ರೆಯು ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸಾನ್ನಿಧ್ಯದಲ್ಲಿ ನಾಗತಂಬಿಲ ನಡೆದು ಬಳಿಕ ಶಿರಾಡಿ ದೈವಕ್ಕೆ ವಿಶೇಷ ತಂಬಿಲ ಸೇವೆ ನಡೆಯಿತು. ನಂತರ ಬಾಳಿಲ ಗ್ರಾಮದ ಮೂರುಕಲ್ಲಡ್ಕದಲ್ಲಿ ನಾಗತಂಬಿಲ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಜ.27ರಂದು ಮೂರುಕಲ್ಲಡ್ಕದಲ್ಲಿ ಬೆಳಗ್ಗೆ ಮಹಾಗಣಪತಿ ಹವನ ಸಹಿತ ಚಂಡಿಕಾ ಹವನ ಮತ್ತು ದುರ್ಗಾಪೂಜೆ, ಶ್ರೀ ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ‘ಕನ್ನಡ ಕೋಗಿಲೆ’ ಖ್ಯಾತಿಯ ಶ್ರೀಮತಿ ಕಲಾವತಿ ದಯಾನಂದ ಅವರ ಕಲಾವಿದರು ಸಂಗೀತ ಬಳಗ ಉಡುಪಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಜ.28ರಂದು ಬೆಳಗ್ಗಿನ ಜಾವ ಅಯ್ಯನಕಟ್ಟೆ ಜಾತ್ರೆಯ ಅಂಗವಾಗಿ ಮೂರುಕಲ್ಲಡ್ಕದಿಂದ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ತೋಟದಮೂಲೆಯಿಂದ ರುದ್ರಚಾಮುಂಡಿ ದೈವಗಳ ಕಿರುವಾಲು ಹೊರಟು, ಬೆಳಗ್ಗೆ ಕಳಂಜ ಗ್ರಾಮದ ಕಲ್ಲಮಾಡದಲ್ಲಿ ಉಳ್ಳಾಕುಲು ಶ್ರೀ ಮುಡಿ ದೈವಗಳ ನೇಮ, ರುದ್ರಚಾಮುಂಡಿ ದೈವದ ನೇಮ ನಡೆದು ಗಂಧಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಗಂಟೆ 8.30ರಿಂದ ಮೂರುಕಲ್ಲಡ್ಕದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಅಧ್ಯಕ್ಷರಾದ ಲಕ್ಷ್ಮಣ ಗೌಡ ಬೇರಿಕೆ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಾ.ಸ್ವ.ಸೇ.ಸಂಘ ಮಂಗಳೂರು ವಿಭಾಗ ಇದರ ಸೇವಾ ಪ್ರಮುಖ್ ಸುಭಾಶ್ಚಂದ್ರ ಕಳಂಜ ಶುಭಾಶಂಸನೆಗೈಯುತ್ತಾ, ಪರಿಸರ ಕಾಳಜಿಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಕೇಂದ್ರ ಅಪರಾಧ ವಿಭಾಗ, ಬೆಂಗಳೂರು ಇಲ್ಲಿನ ಸಹಾಯಕ ಪೊಲೀಸು ಆಯುಕ್ತರಾದ ಜಗನ್ನಾಥ ರೈ ಬಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷರು ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಮೇಳದ ಮುಖ್ಯಸ್ಥರಾದ ಪಟ್ಲ ಸತೀಶ ಶೆಟ್ಟಿ ಭಾಗವಹಿಸಿ ಜಾತ್ರೋತ್ಸವಕ್ಕೆ ಶುಭಹಾರೈಸಿದರು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ದೋಳ್ತೋಡಿ ವಂದಿಸಿದರು. ಜಗದೀಶ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಧ್ರುವ ಶ್ರೀ ಪಟ್ಲ ಸತೀಶ ಶೆಟ್ಟಿ ನೇತೃತ್ವದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಧರ್ಮ ಸಿಂಹಾಸನ’ ಯಕ್ಷಗಾನ ಬಯಲಾಟ ನಡೆಯಿತು. ಜ.29ರಂದು ಬೆಳಗ್ಗೆ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ, ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ, ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಕಲ್ಲಮಾಡದ ಬಳಿ ಶಿರಾಡಿ, ಧೂಮಾವತಿ ಹಾಗೂ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಕಲ್ಲಮಾಡದ ಬಳಿ ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ ನಡೆದು ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ ಮಾರಿ ಹೊರಡುವುದರೊಂದಿಗೆ ವಿಜೃಂಭಣೆಯ “ಅಯ್ಯನಕಟ್ಟೆ ಜಾತ್ರೆ” ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷರಾದ ಲಕ್ಷ್ಮಣ ಗೌಡ ಬೇರಿಕೆ, ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್, ಕೋಶಾಧಿಕಾರಿ ಗಣೇಶ ಮುದ್ದಾಜೆ ಹಾಗೂ ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಾಧವ ಗೌಡ ಅಯ್ಯನಕಟ್ಟೆ, ಕಾರ್ಯಾಧ್ಯಕ್ಷ ಶ್ರೀನಾಥ್ ರೈ ದೋಳ್ತೋಡಿ ಮತ್ತು ಸಮಿತಿಯ ಸದಸ್ಯರು, ಸಂಚಾಲಕರು, ಉಪಸಮಿತಿಗಳ ಸದಸ್ಯರು, ಊರ-ಪರವೂರ ಭಗವದ್ಭಕ್ತರು ಉಪಸ್ಥಿತರಿದ್ದರು.