ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ, ನಂಬಿದವರಿಗೆ ಇಂಬು ಕೊಡುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ “ಅಯ್ಯನಕಟ್ಟೆ ಜಾತ್ರೆ” ನಡೆಯುತ್ತಿದ್ದು ಜ.28ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಅಧ್ಯಕ್ಷರಾದ ಲಕ್ಷ್ಮಣ ಗೌಡ ಬೇರಿಕೆ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಾ.ಸ್ವ.ಸೇ.ಸಂಘ ಮಂಗಳೂರು ವಿಭಾಗ ಇದರ ಸೇವಾ ಪ್ರಮುಖ್ ಸುಭಾಶ್ಚಂದ್ರ ಕಳಂಜ ಶುಭಾಶಂಸನೆಗೈಯುತ್ತಾ, ಪರಿಸರ ಕಾಳಜಿಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಕೇಂದ್ರ ಅಪರಾಧ ವಿಭಾಗ, ಬೆಂಗಳೂರು ಇಲ್ಲಿನ ಸಹಾಯಕ ಪೊಲೀಸು ಆಯುಕ್ತರಾದ ಜಗನ್ನಾಥ ರೈ ಬಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷರು ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ
ಪಾವಂಜೆ ಮೇಳದ ಮುಖ್ಯಸ್ಥರಾದ ಪಟ್ಲ ಸತೀಶ ಶೆಟ್ಟಿ ಭಾಗವಹಿಸಿ ಜಾತ್ರೋತ್ಸವಕ್ಕೆ ಶುಭಹಾರೈಸಿದರು.
ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ದೋಳ್ತೋಡಿ ವಂದಿಸಿದರು. ಜಗದೀಶ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಧ್ರುವ ಶ್ರೀ ಪಟ್ಲ ಸತೀಶ ಶೆಟ್ಟಿ ನೇತೃತ್ವದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಧರ್ಮ ಸಿಂಹಾಸನ’ ಯಕ್ಷಗಾನ ಬಯಲಾಟ ನಡೆಯಿತು.
ಜ.29ರಂದು ಬೆಳಗ್ಗೆ 7.30ಕ್ಕೆ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡಲಿದೆ. ಬಳಿಕ ಬೆಳಗ್ಗೆ 10.00ಕ್ಕೆ ಕಲ್ಲಮಾಡದ ಬಳಿ ಶಿರಾಡಿ, ಧೂಮಾವತಿ ಹಾಗೂ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ 1.00ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ಅಪರಾಹ್ನ 2.30ಕ್ಕೆ ಕಲ್ಲಮಾಡದ ಬಳಿ ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ, ಸಂಜೆ 5.00ರಿಂದ ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ ಮಾರಿ ಹೊರಡಲಿರುವುದು. ಈ ಎಲ್ಲಾ ಕಾರ್ಯಗಳಲ್ಲಿ ಭಗವದ್ಭಕ್ತರು ಭಾಗಿಗಳಾಗಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ವಿನಂತಿಸಿದ್ದಾರೆ.