ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ, ನಂಬಿದವರಿಗೆ ಇಂಬು ಕೊಡುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ “ಅಯ್ಯನಕಟ್ಟೆ ಜಾತ್ರೆ”ಯ ಅಂಗವಾಗಿ ಇಂದು ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆದು ಬಳಿಕ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆಯಿತು. ನಂತರ ಗಂಧಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷರಾದ ಲಕ್ಷ್ಮಣ ಗೌಡ ಬೇರಿಕೆ, ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್, ಕೋಶಾಧಿಕಾರಿ ಗಣೇಶ ಮುದ್ದಾಜೆ ಹಾಗೂ ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಾಧವ ಗೌಡ ಅಯ್ಯನಕಟ್ಟೆ, ಕಾರ್ಯಾಧ್ಯಕ್ಷ ಶ್ರೀನಾಥ್ ರೈ ದೋಳ್ತೋಡಿ ಮತ್ತು ಸಮಿತಿಯ ಸದಸ್ಯರು, ಸಂಚಾಲಕರು, ಉಪಸಮಿತಿಗಳ ಸದಸ್ಯರು, ಊರವರು, ಭಗವದ್ಭಕ್ತರು ಉಪಸ್ಥಿತರಿದ್ದರು.
ಇಂದು ಸಂಜೆ ಗಂಟೆ 6.00 ರಿಂದ 7.00ರವರೆಗೆ ಮೂರುಕಲ್ಲಡ್ಕದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಸುಭಾಶ್ಚಂದ್ರ ಕಳಂಜ ಸೇವಾ ಪ್ರಮುಖ್, ರಾ.ಸ್ವ.ಸೇ.ಸಂಘ ಮಂಗಳೂರು ವಿಭಾಗ ಶುಭಾಶಂಸನೆಗೈಯಲಿದ್ದಾರೆ. ಅಭ್ಯಾಗತರಾಗಿ ಶ್ರೀ ಜಗನ್ನಾಥ ರೈ ಬಿ
ಸಹಕಾರ ಪೊಲೀಸು ಆಯುಕ್ತರು, ಕೇಂದ್ರ ಅಪರಾಧ ವಿಭಾಗ, ಬೆಂಗಳೂರು, ಅತಿಥಿಗಳಾಗಿ ಶ್ರೀ ಆಂಜನೇಯ ರೆಡ್ಡಿ ಆರಕ್ಷಕ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸು ಠಾಣೆ ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಗಂಟೆ 7.00ರಿಂದ 10.00ರ ವರೆಗೆ ಯಕ್ಷಧ್ರುವ ಶ್ರೀ ಪಟ್ಲ ಸತೀಶ ಶೆಟ್ಟಿ ನೇತೃತ್ವದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಧರ್ಮ ಸಿಂಹಾಸನ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಜ.29ರಂದು ಬೆಳಗ್ಗೆ 7.30ಕ್ಕೆ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಭಂಡಾರ ಹೊರಡುವುದು, ಬೆಳಗ್ಗೆ 8.00ಕ್ಕೆ ಬಾಳಿಲ ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡಲಿದೆ. ಬಳಿಕ ಬೆಳಗ್ಗೆ 10.00ಕ್ಕೆ ಕಲ್ಲಮಾಡದ ಬಳಿ ಶಿರಾಡಿ, ಧೂಮಾವತಿ ಹಾಗೂ ಕೊಡಮಣಿತ್ತಾಯ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ 1.00ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ಅಪರಾಹ್ನ 2.30ಕ್ಕೆ ಕಲ್ಲಮಾಡದ ಬಳಿ ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ, ಸಂಜೆ 5.00ರಿಂದ ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ ಮಾರಿ ಹೊರಡಲಿರುವುದು. ಈ ಎಲ್ಲಾ ಕಾರ್ಯಗಳಲ್ಲಿ ಭಗವದ್ಭಕ್ತರು ಭಾಗಿಗಳಾಗಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ವಿನಂತಿಸಿದ್ದಾರೆ.