ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ “ಅಯ್ಯನಕಟ್ಟೆ ಜಾತ್ರೆ” ಜ.26 ಬುಧವಾರದಿಂದ ಆರಂಭಗೊಳ್ಳಲಿದ್ದು, ಇಂದು(ಜ.25) ಹಸಿರು ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಭಕ್ತರಿಂದ ನೀಡಲಾದ ಹಸಿರು ಕಾಣಿಕೆಯನ್ನು ವೈಭವದ ಶೋಭಾಯಾತ್ರೆ ಮೆರವಣಿಗೆಯ ಮೂಲಕ ಬಾಳಿಲದಲ್ಲಿನ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಮಹಾದ್ವಾರದ ಬಳಿಯಿಂದ ಹೊರಟು ಮೂರುಕಲ್ಲಡ್ಕದಲ್ಲಿನ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಾನಕ್ಕೆ ತರಲಾಯಿತು.
ಈ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಗವದ್ಭಕ್ತರು ಭಾಗವಹಿಸಿದ್ದು ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷರಾದ ಲಕ್ಷ್ಮಣ ಗೌಡ ಬೇರಿಕೆ, ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್, ಕೋಶಾಧಿಕಾರಿ ಗಣೇಶ ಮುದ್ದಾಜೆ ಹಾಗೂ ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಾಧವ ಗೌಡ ಅಯ್ಯನಕಟ್ಟೆ, ಕಾರ್ಯಾಧ್ಯಕ್ಷ ಶ್ರೀನಾಥ್ ರೈ ದೋಳ್ತೋಡಿ ಮತ್ತು ಸಮಿತಿಯ ಸದಸ್ಯರು, ಸಂಚಾಲಕರು, ಉಪಸಮಿತಿಗಳ ಸದಸ್ಯರು, ಊರವರು ಉಪಸ್ಥಿತರಿದ್ದರು.
ಜಾತ್ರೋತ್ಸವವು ಜ.26 ಬುಧವಾರದಿಂದ ಜ.29 ಶನಿವಾರದ ವರೆಗೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.