ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಜಾತ್ರೋತ್ಸವದಲ್ಲಿ ಸಂದರ್ಭ ಹೂವಿನ ರಾಶಿಯನ್ನು ಮೇಲೆ ಹೊದ್ದು ಭಕ್ತ ಸಮೂಹದ ಗಮನ ಸೆಳೆಯುತ್ತಿದೆ. ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲ ಭಾಗಗಳೂ ಬಣ್ಣ- ಬಣ್ಣದ, ಬಗೆ-ಬಗೆ ಹೂವುಗಳು ನಳನಳಿಸುತ್ತಿವೆ. ಮಂಗಳೂರಿನಲ್ಲಿ ಹೂವಿನ ಉದ್ಯಮ ನಡೆಸುತ್ತಿರುವ ಕ್ಷೇತ್ರದ ಭಕ್ತರೊಬ್ಬರು ಹಲವು ವರ್ಷದಿಂದ ಸೇವಾ ರೂಪದಲ್ಲಿ ಈ ಹೂವಿನ ಅಲಂಕಾರ ಅರ್ಪಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಅದರ ಪ್ರಮಾಣ ಹೆಚ್ಚಾಗುತ್ತಿರುವುದಿಂದ ಇಡಿ ದೇವಾಲಯದಲ್ಲಿ ಹೂವುಗಳಿಂದ ಅಲಂಕಾರಗೊಂಡು ಶೋಭಿಸುತ್ತಿದೆ.
ಪೆರುವಾಜೆ ಶ್ರೀ ಜಲದುರ್ಗಾದೇವಿಯ ಭಕ್ತ, ಪೆರುವಾಜೆ ಗ್ರಾಮದ ನಿವಾಸಿ, ಮಂಗಳೂರಿನ ಐರಿಷ್ ಫ್ಲವರ್ ಸ್ಟಾಲ್ ಮಾಲಕ ಉಮೇಶ್ ಕೊಟ್ಟೆಕಾೖ ಅವರು ಪ್ರತಿ ವರ್ಷ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸುತ್ತಾರೆ. ಹಲವು ವರ್ಷಗಳಿಂದ ಸೇವೆ ಮಾಡುವ ಉಮೇಶ್ ಮತ್ತು ಅವರ ಕುಟುಂಬ ಶ್ರೀ ಕ್ಷೇತ್ರದ ಪರಮ ಭಕ್ತರು.
ಉಮೇಶ್ ಹೂವಿನ ಮಾರುಕಟ್ಟೆಯಲ್ಲಿ ಕೆಲಸ ಆರಂಭಿಸಿ, ಬಳಿಕ ಮಂಗಳೂರು ಮತ್ತು ಉಡುಪಿಯಲ್ಲಿ ಐರಿಷ್ ಫ್ಲವರ್ ಸ್ಟಾಲ್ ಸ್ವಂತ ಮಾರಾಟ ಕೇಂದ್ರ ಸ್ಥಾಪಿಸಿದ್ದರು. 100ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ವ್ಯವಹಾರದಲ್ಲಿ ಯಶಸ್ಸು ಗಳಿಸಿರುವ ಇವರು, ಇದಕ್ಕೆ ಜಲದುರ್ಗಾದೇವಿಯ ಕೃಪೆಯೇ ಕಾರಣ ಎಂದು ಭಕ್ತನ ನೆಲೆಯಲ್ಲಿ ದೇವಿಗೆ ಹೂವಿನ ಅಲಂಕಾರ ಮಾಡುತ್ತಾರೆ.
2006ರಿಂದ ಈ ಸೇವೆ ಆರಂಭಿಸಿದ್ದು, 2016ರ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕೂಡ ದೇವಾಲಯವನ್ನು ಹೂವಿನಿಂದ ಶೃಂಗರಿಸಿದ್ದರು. ಪ್ರತಿ ವರ್ಷವು ಹೆಚ್ಚು-ಹೆಚ್ಚು ಹೂವು ಅರ್ಪಿಸುತ್ತಾರೆ. ಈ ಬಾರಿಯ ಜಾತ್ರೆಗೆ ಮಾರುಕಟ್ಟೆ ಮೌಲ್ಯದ ಪ್ರಕಾರ 7ರಿಂದ 8 ಲಕ್ಷ ರೂ.ಮೌಲ್ಯದ ಹೂವು ಬಳಸಲಾಗಿದೆ.