ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ “ವಿವೇಕ ಚಿಂತನೆ- ಬದುಕಿಗೆ ದಾರಿ” ಎಂಬ ಶೀರ್ಷಿಕೆಯಡಿಯಲ್ಲಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮ ಜನವರಿ 12 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ” ವಿವೇಕಾನಂದರು ಯುವಜನತೆಯ ಮೇಲೆ ನಂಬಿಕೆ ಇಟ್ಟವರು. ಯುವಜನತೆ ದೇಶದ ಸಂಪತ್ತು, ತನ್ನಲ್ಲಿರುವ ಶಕ್ತಿಯನ್ನು ಹೊರಹಾಕಿದಾಗ ಸದೃಢ ದೇಶ ಕಟ್ಟಲು ಸಾಧ್ಯ” ಎಂದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಉಪಸ್ಥಿತರಿದ್ದರು. ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್ ಕ್ರಾಸ್ ಘಟಕ ನಾಯಕರಾದ ನಿರಂಜನ್ ಕೆ ಲಿಮಿತಾ ಪಿ ಜೆ, ಉಪನ್ಯಾಸಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರತ್ನ ಸಿಂಚನ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಭೂಮಿಕಾ ಸ್ವಾಗತಿಸಿ, ಅಕ್ಷತಾ ವಂದಿಸಿದರು. ಲತಾಶ್ರೀ ಡಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಯುವ ದಿನಾಚರಣೆ ಪ್ರಯುಕ್ತ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
- Sunday
- November 24th, 2024