ಉಡುಪಿಯಲ್ಲಿ ಬೃಹತ್ ಜವುಳಿ ಪಾರ್ಕ್ ಅನ್ನು ನಿರ್ಮಾಣ ಮಾಡಲಾಗುವುದು. ಇಲ್ಲಿ ಬಾರೀ ಪ್ರಮಾಣದಲ್ಲಿ ಜವುಳಿ ಉದ್ದಿಮೆಯನ್ನು ಆರಂಭಿಸಲಾಗುವುದು. ಸುಮಾರು 20 ಎಕರೆ ಪ್ರದೇಶದಲ್ಲಿ ಶೀಘ್ರ ಜವುಳಿ ಪಾರ್ಕ್ ನಿರ್ಮಾಣಗೊಳ್ಳಲಿದೆ. ಈ ಮೂಲಕ ಸಹಸ್ರಾರು ಜನರಿಗೆ ಉದ್ಯೋಗವಕಾಶ ದೊರಯಲಿದೆ. ಜವುಳಿ ಪಾರ್ಕ್ ಮಾಡಲು ಬೇಕಾದ ಯೋಜನೆಗಳನ್ನು ಸಿದ್ದಪಡಿಸಲಾಗಿದ್ದು ಸರಕಾರ ಮಟ್ಟದಲ್ಲಿ ಆಗಬೇಕಾದ ನಿಯಮಗಳನ್ನು ಶೀಘ್ರ ರೂಪಿಸಿ ಶೀಘ್ರ ಜವುಳಿ ಪಾರ್ಕ್ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕೈಮಗ್ಗ ಮತ್ತು ಜವುಳಿ ಇಲಾಖೆ, ಕಬ್ಬು ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಿ.31 ರಂದು ಭೇಟಿ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೇಕಾರರಿಗೆ ಮತ್ತು ಇತರರಿಗೆ ನೇಕಾರಿಕೆಯ ಕೌಶಲ್ಯ ಅರಿತುಕೊಳ್ಳಲು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ಈ ಕಾರ್ಯಾಗಾರವು ನಡೆಯಲಿದೆ. ಈ ಮೂಲಕ ನೇಕಾರಿಕೆಯ ಬಗ್ಗೆ ಅರಿತುಕೊಂಡು ಜವುಳಿ ಉದ್ಯಮ ಆರಂಭಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ನೇಕಾರರನ್ನು ರೈತರು ಎಂದು ಪರಿಗಣಿಸುವ ನಿಯಮ ಜಾರಿಗೆ ತರಲಾಗಿದೆ. ನೇಕಾರರಿಗೆ ಕೂಡಾ ರೈತರಿಗೆ ದೊರಕುವ ಪರಿಹಾರಗಳು ಇನ್ನು ಮುಂದೆ ದೊರಯಲಿದೆ. ನೇಕಾರರ ಸಮಗ್ರ ಅಭಿವೃದ್ಧಿಗಾಗಿ ನೇಕಾರ್ ಸಮ್ಮಾನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು.
2020-21ರ ಅವಧಿಯಲ್ಲಿ ಸುಮಾರು 120 ಕೋಟಿ ರೂ ಮೊತ್ತವನ್ನು ರಿಯಾಯಿತಿ ರೂಪದಲ್ಲಿ ನೇಕಾರರಿಗೆ ನೀಡಲಾಗಿದೆ. ಕೈಮಗ್ಗ, ಟೆಕ್ಸ್ ಟೈಲ್, ಪವರ್ ಲೂಮ್ ಅಭಿವೃದ್ಧಿಗೊಳಿಸಿ ಅವುಗಳನ್ನು ಉಳಿಸುವತ್ತ ಸರಕಾರವು ಗರಿಷ್ಠ ಗಮನ ನೀಡಲಾಗಿದೆ. ಆಧುನಿಕ ತಂತ್ರಜ್ಞಾನದ ನಡುವೆಯೂ ಹಳೆ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಜವಬ್ದಾರಿಯಾಗಿದೆ. ಆದುರಿಂದ ನೇಕಾರಿಕೆಯನ್ನು ಬೆಳೆಸುವತ್ತ ಮತ್ತು ನೇಕಾರಿಕೆಗೆ ಉತ್ತೇಜನ ನೀಡಲು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದೇನೆ.
ದೇಶದಲ್ಲಿ ಮೇಘಾ ಟೆಕ್ಸ್ ಟೈಲ್ ಪಾರ್ಕ್ ಆರಂಬಿಸುವ ಯೋಜನೆಯನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದೆ. ಈ ಯೋಜನೆಯಲ್ಲಿ ರಾಜ್ಯದಲ್ಲಿ ಕೂಡಾ ಮೇಘಾ ಟೆಕ್ಸ್ಟೈಲ್ ಪಾರ್ಕ್ ಆರಂಭಿಸುವ ಬೇಡಿಕೆಯನ್ನು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳ ಬಳಿ ಬೇಡಿಕೆ ಇರಿಸಿದ್ದಾರೆ. ಆದುದರಿಂದ ಮೇಘಾ ಟೆಕ್ಸ್ಟೈಲ್ ರಾಜ್ಯದ ಯಾವುದಾದರೊಂದು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುವ ಭರವಸೆ ಇದೆ. ರಾಜ್ಯದ ಯಾವುದೇ ಭಾಗದಲ್ಲಿ ಅನುಷ್ಠಾನಗೊಂಡರೂ ರಾಜ್ಯದ ಲಕ್ಷಾಂತರ ಮಂದಿಗೆ ಉದ್ಯೋಗವಕಾಶ ದೊರಕಲಿದೆ. ಜವುಳಿ ಇಲಾಖೆಯು ಈಗಾಗಲೇ ಅಸಂಖ್ಯಾತ ಜನರಿಗೆ ಉದ್ಯೋಗವಕಾಶ ನೀಡಿದೆ. ಮಹಿಳೆಯರು ಟೆಕ್ಸ್ ಟೈಲ್ ಮತ್ತು ಟೈಲರಿಂಗ್ ಉದ್ಯೋಗ ಮಾಡುವ ಮೂಲಕ ಪ್ರಗತಿ ಸಾಧಿಸುತ್ತಿದ್ದಾರೆ. ಇನ್ನಷ್ಟು ಮಂದಿಗೆ ಉದ್ಯೋಗವಕಾಶ ನೀಡಲು ಹಾಗೂ ಸ್ವ ಉದ್ಯೋಗ ಮಾಡಲು ವಿಶೇಷ ಪ್ರೋತ್ಸಾಹವನ್ನು ಜವಳಿ ಇಲಾಖೆಯಿಂದ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಕೌಶಲ್ಯ ತರಬೇತಿ:
ಸರಕಾರ ಮಟ್ಟದಿಂದ ತರಬೇತಿ ಶಿಬಿರ ಹಮ್ಮಿಕೊಂಡು ಅದರಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು. ತರಬೇತಿ ಪಡೆದವರು ಸ್ವ ಉದ್ಯೋಗ ಮಾಡುವುದಾದರೆ ಅವರಿಗೆ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ದೊರಕುವಂತೆ ಮಾಡಲಾಗುವುದು. ಉಡುಪಿ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಜವುಳಿ ಉದ್ಯಮವನ್ನು ಆರಂಭಿಸಲಾಗುವುದು. ಅಲ್ಲದೆ ಉದ್ಯಮಿಗಳಿಗೆ ಜವುಳಿ ಉದ್ಯಮ ಮಾಡಲು ವಿಶೇಷವಾದ ಕೊಡುಗೆಗಳನ್ನು ಸರಕಾರ ನೀಡಲಿದೆ ಎಂದರು.
ನೇಕಾರರನ್ನು ದೊಡ್ಡ ಉದ್ಯಮಿಗಳನ್ನಾಗಿ ಮಾಡುವ ಇರಾದೆ ಸರಕಾರದ್ದಾಗಿದೆ. ದೇಶದಲ್ಲಿ ಕೈಯಿಂದ ಮಾಡಿದ ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಆದರೆ ಅದೇ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. ಆದುದರಿಂದ ಹೆಚ್ಚು ಹೆಚ್ಚು ಉತ್ಪಾದನೆ ಮಾಡಲು ನೇಕಾರರನ್ನು ಪ್ರೋತ್ಸಾಹಿಸಲಾಗುವುದು. ಅಲ್ಲದೆ ಅವರಿಗಾಗಿ ವಿಶೇಷ ಕಾರ್ಯ ಯೋಜನೆಗಳನ್ನು ಸಿದ್ದಪಡಿಸಲಾಗುವುದು. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡು ಹೆಚ್ಚು ಹೆಚ್ಚು ಉತ್ಪಾದನೆ ಮಾಡಿ ಅವುಗಳನ್ನು ರಪ್ತು ಮಾಡುವತ್ತ ಹೆಚ್ಚಿನ ಗಮನ ಕೊಡಲಾಗುವುದು. ಮಂಗಳೂರು ಮತ್ತು ಉಡುಪಿಯಲ್ಲಿ ಬಂದರು ಇರುವುದರಿಂದ ನಮ್ಮ ಉತ್ಪಾದನೆಗಳನ್ನು ಪ್ರಪಂಚಾದ್ಯಂತ ಪಸರಿಸಲು ಬೇಕಾದ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.
ನೇಕಾರರ ಸಮಸ್ಯೆಗಳ ನಿವಾರಣೆಗೆ ಹಾಗೂ ಅವರ ಕುಂದು ಕೊರತೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಇರುವ ನೇಕಾರರನ್ನು ಭೇಟಿಯಾಗುವ ಕಾರ್ಯವನ್ನು ಮಾಡುತ್ತಿದ್ದೇನೆ. ನೇಕಾರರ ಕಾಲನಿಗೆ ಭೇಟಿ ನೀಡಿ ಅವರ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ನೇಕಾರರ ಪ್ರಗತಿಗಾಗಿ ಕೇಂದ್ರ ಸರಕಾರವು ಜಾರಿಗೆ ತಂದ ಜವುಳಿ ನೀತಿಯನ್ನು ಅನುಷ್ಠಾನಗೊಳಿಸುವ ಮೂಲಕ ಅವರ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಅದೇ ರೀತಿ ಸಿದ್ಧ ಉಡುಪುಗಳನ್ನು ತಯಾರಿಸುವ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿನೂತನ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಸಚಿವರು ಹೇಳಿದರು.
ಕುಕ್ಕೆ ಶ್ರೀ ದೇವರ ದರುಶನ:
ಸಚಿವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು. ಸಚಿವರಿಗೆ ದೇವಳದ ಅರ್ಚಕ ವೇದಮೂರ್ತಿ ರಾಮಕೃಷ್ಣ ನೂರಿತ್ತಾಯರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ಬಳಿಕ ಶ್ರೀ ದೇವಳದ ಆಡಳಿತ ಕಚೇರಿಗೆ ಆಗಮಿಸಿ ಸಚಿವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭ ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ್ ಮರ್ದಾಳ, ಮಾಜಿ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್ ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ