ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಅರ್ಬಿತ್ತಾಯರು ಇಂದು ಬೆಳಿಗ್ಗೆ ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದದ ಸೋಮಶೇಖರ್ ಎಂಬವವರ ಮನೆಗೆ ಬ್ಯಾಡ್ಮಿಂಟನ್ ಆಟವಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹತ್ತಿರದ ಗುಡ್ಡದಿಂದ ಕಡವೆ ಹಾರಿದ ಪರಿಣಾಮ ರಾಮಚಂದ್ರ ಅರ್ಬಿತ್ತಾಯರ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ದ್ವಿಚಕ್ರ ವಾಹನ ಪಲ್ಟಿಯಾಯಿತು. ಪರಿಣಾಮ ರಾಮಚಂದ್ರರು ಸ್ಥಳದಲ್ಲೇ ಕೊನೆಯುಸಿರೆಳೆದರು. ಹಾಗೂ ಇವರ ಸಹೋದರನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರಿಗೆ 53 ವರ್ಷ ವಯಸ್ಸಾಗಿದ್ದು, ವೃತ್ತಿಯಲ್ಲಿ ಶಾಲಾ ಗುಮಾಸ್ತರಾಗಿದ್ದರೂ ಸಹ ಭಾಗವತರಾಗಿ ಹಾಗೂ ಕೀಬೋರ್ಡ್ ವಾದಕರಾಗಿ ಪ್ರಖ್ಯಾತರಾಗಿದ್ದರು. ಇವರು ಗಾಂಗೇಯ ಕ್ರಿಕೆಟ್ ತಂಡ ಸುಬ್ರಹ್ಮಣ್ಯ ಇದರ ಆಟಗಾರರಾಗಿದ್ದರು ಹಾಗೂ ರಾಜ್ಯ ಮಟ್ಟದ ಶಟಲ್ ಆಟಗಾರರಾಗಿದ್ದರು. ಇವರ ತಂದೆ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯ ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗೂ ಇವರ ಸಹೋದರ ಸುಬ್ರಹ್ಮಣ್ಯ ದೇವಸ್ಥಾನದ ಖಾಯಂ ನೌಕಕರಾಗಿದ್ದಾರೆ.
ರಾಮಚಂದ್ರ ಅರ್ಬಿತ್ತಾಯ ಅವರು ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಡಿತ್ತಾಯ ಅವರ ಸೋದರಳಿಯ ಹಾಗೂ ಶಿಷ್ಯರಾಗಿದ್ದರು. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುಳ್ಯ ಪರಿಸರದಲ್ಲಿ ಭಜನಾ ಕಾರ್ಯಕ್ರಮಗಳಲ್ಲಿಯೂ ಸಕ್ರೀಯರಾಗಿದ್ದ ರಾಮಚಂದ್ರ ಅರ್ಬಿತ್ತಾಯರು ಅವಿವಾಹಿತರಾಗಿದ್ದು, ತಾಯಿ, ಸಹೋದರಿ, ಸಹೋದರ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
(ವರದಿ :- ಉಲ್ಲಾಸ್ ಕಜ್ಜೋಡಿ)