ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣಮತ್ತು ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಆಡಳಿತ ಮಂಡಳಿಯು ಸ್ವಚ್ಚ ಮಂದಿರ ಸೇವಾ ಅಭಿಯಾನವನ್ನು ಆರಂಭಿಸಿದೆ. ಪ್ರತಿ ಏಕಾದಶಿಯಂದು ಕ್ಷೇತ್ರಾದ್ಯಂತ ಏಕಕಾಲದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಈ ಯೋಜನೆಯು ಕ್ಷೇತ್ರ ಸ್ವಚ್ಚತೆ ಸೇರಿದಂತೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸ್ವಚ್ಚತಾ ಜಾಗೃತಿಯ ಕಹಳೆ ಮೊಳಗಿಸಲು ಬುನಾದಿಯಾಗಲಿದೆ.ಏಕಾದಶಿ ದಿನವನ್ನು ಸ್ವಚ್ಚ ಸೇವಾ ದಿವಸ್ ಎಂದು ಪರಿಗಣಿಸಿಕೊಂಡು ಸೇವೆ ನೆರವೇರಿಸಲಾಗುವುದು ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ತಿಂಗಳಲ್ಲಿ ೨ ಬಾರಿ ಸ್ವಚ್ಚತೆ:
ಪುಣ್ಯ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಪ್ರತಿ ದಿನ ಸಹಸ್ರಾರು ಭಕ್ತರು ಬರುವುದರಿಂದ ಕ್ಷೇತ್ರದಲ್ಲಿ ನಿರಂತರವಾಗಿ ಸ್ವಚ್ಚತೆ ಅನುಷ್ಠಾನಗೊಳಿಸಲು ಈ ಯೋಜನೆಯನ್ನು ಸಾಕ್ಷಾತ್ಕಾರಗೊಳಿಸಲಾಗಿದೆ.ತಿಂಗಳಲ್ಲಿ ಬರುವ ಎರಡು ಏಕಾದಶಿ ದಿನ ಕ್ಷೇತ್ರಾದ್ಯಂತ ಮಧ್ಯಾಹ್ನ ೨ಗಂಟೆಯಿAದ ೩.೩೦ರ ತನಕ ಸ್ವಚ್ಚತೆ ನಡೆಸಲಾಗುವುದು.ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ, ಮಾಸ್ಟರ್ ಪ್ಲಾನ್ ಸಮಿತಿ, ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗ, ದೇವಳದ ಆಡಳಿತದ ಎಸ್‌ಎಸ್‌ಪಿಯು ಕಾಲೇಜು, ಪ್ರೌಢಶಾಲಾ ವಿಭಾಗ, ಕೆ.ಎಸ್.ಎಸ್.ಕಾಲೇಜುಗಳ ಎನ್.ಎಸ್.ಎಸ್, ಸ್ಕೌಟ್ಸ್ ಗೈಡ್ಸ್, ರೋವರ್ ರೇಂರ‍್ಸ್, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ವರ್ತಕರು ಸೇರಿದಂತೆ ಏಕಕಾಲದಲ್ಲಿ ಸುಮಾರು ೧೦೦೦ಕ್ಕೂ ಅಧಿಕ ಮಂದಿ ೨೫ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ನೆರವೇರಿಸಲಿದ್ದಾರೆ ಎಂದು ಮೋಹನರಾಂ ಸುಳ್ಳಿ ಹೇಳಿದರು.
ಸ್ಥಳ ನಿಗದಿ:
ದೇವಳದ ಒಳಾಂಗಣ,ಹೊರಾAಗಣ, ಭೋಜನ ಶಾಲೆ, ದರ್ಪಣ ತೀರ್ಥ ನದಿ, ಗೋಪುರ ವಠಾರ, ರಥಬೀದಿ, ಪಾರ್ಕಿಂಗ್ ಸ್ಥಳ, ಆಂಜನೇಯ ಗುಡಿ, ಬೈಪಾಸ್ ರಸ್ತೆ, ವಸತಿ ಗೃಹಗಳ ವಠಾರ, ಆದಿ ಸುಬ್ರಹ್ಮಣ್ಯ, ಕಾಶಿಕಟ್ಟೆ, ಬಸ್ ನಿಲ್ದಾಣ, ಸರ್ಪಸಂಸ್ಕಾರ ಬೋಜನ ಶಾಲೆ, ಕಾಶಿಕಟ್ಟೆ, ಬಿಲದ್ವಾರ, ವನದುರ್ಗಾ ದೇವಿ ದೇವಳದಿಂದ ವಲ್ಲೀಶ ಸಭಾ ಭವನದ ತನಕ, ವಲ್ಲೀಶದಿಂದ ಕುಮಾರಧಾರ ಸ್ನಾನ ಘಟ್ಟದ ತನಕ, ಅಗ್ರಹಾರ ರಸ್ತೆ ಈ ರೀತಿಯಾಗಿ ಸ್ಥಳ ನಿಗದಿ ಮಾಡಿ ಆಯಾ ಪ್ರದೇಶಗಳಿಗೆ ತಂಡಗಳನ್ನು ನಿಯೋಜನೆ ಮಾಡಿ ಈಗಾಗಲೇ ಜವಬ್ದಾರಿ ನೀಡಲಾಗಿದೆ.ತಮಗೆ ನಿಗದಿ ಪಡಿಸಿದ ಸ್ಥಳದಲ್ಲಿ ಸೇವೆ ನೆರವೇರಿಸುವುದು ತಂಡದ ಆಧ್ಯತೆಯಾಗಿದೆ.ಈ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಸಮಿತಿ ರಚಿಸಲಾಗಿದೆ.ಸಮಿತಿಯು ಸ್ವಚ್ಚತಾ ಕೈಂಕರ್ಯದ ಬಗ್ಗೆ ಮೌಲ್ಯ ಮಾಪನ ಮಾಡಲಿದೆ. ಸ್ವಚ್ಚ ಮಂದಿರ ಅಭಿಯಾನ ಅನುಷ್ಠಾನದ ಬಾಬ್ತು ಈಗಾಗಲೇ ದೇವಳದ ಸಿಬ್ಬಂಧಿಗಳು ತಮ್ಮ ತಂಡದ ಮೂಲಕ ದೇವಳದ ಒಳಾಂಗಣ ಮತ್ತು ಹೊರಾಂಗಣ ಮೊದಲಾದ ಕಡೆ ಒಂದು ಸುತ್ತು ಸ್ವಚ್ಚತಾ ಸೇವೆ ನಡೆಸಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಿಳಿಸಿದರು.
ಭಕ್ತರಿಗೆ ಅವಕಾಶ:
ಶ್ರೀ ದೇವರಿಗೆ ಸಲ್ಲಿಸುವ ಸೇವೆಗಳಲ್ಲಿ ಸ್ವಚ್ಚತಾ ಸೇವೆಯು ಪ್ರಮುಖವಾಗಿದ್ದು ಇದನ್ನು ನೆರವೇರಿಸಲು ಸ್ವಯಂಪ್ರೇರಿತರಾಗಿ ಆಗಮಿಸುವ ಭಕ್ತರಿಗೆ ಅವಕಾಶ ಮಾಡಿಕೊಡಲಾಗುವುದು.ದೇವಳದಲ್ಲಿ ಭಕ್ತರು ಹೆಸರನ್ನು ನೋಂದಾಯಿಸಿಕೊAಡು ಸೇವೆ ಮಾಡಬಹುದು. ಸ್ವಚ್ಚತೆ ಮಾಡುವುದರೊಂದಿಗೆ ಕುಕ್ಕೆ ಸುಬ್ರಹ್ಮಣ್ಯನ ಸೇವೆ ನೆರವೇರಿಸುವ ವಿನೂತನ ಅವಕಾಶ ಆಡಳಿತ ಮಂಡಳಿ ಭಕ್ತರಿಗೆ ಈ ಮೂಲಕ ಒದಗಿಸುತ್ತಿದೆ. ದೂರದೂರಿನ ಭಕ್ತರು ಕೂಡಾ ಸೇವಾಕಾರ್ಯವನ್ನು ನೆರವೇರಿಸಬಹುದು. ಅಲ್ಲದೆ ಕ್ಷೇತ್ರದಾದ್ಯಂತ ಅಲ್ಲಲ್ಲಿ ಸ್ವಚ್ಚತೆಯ ಬಗ್ಗೆ ನಾಮ ಫಲಕ ಅಳವಡಿಸುವ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸುವ ಕಾರ್ಯವು ಈ ಮೂಲಕ ನೆರವೇರಲಿದೆ.ಮುಂದಿನ ಎಲ್ಲಾ ಏಕಾದಶಿಯಂದು ಈ ಸೇವೆ ನೆರವೇರಲಿದೆ.
ಇಂದು ಚಾಲನೆ:
ಏಕಾದಶಿಯ ದಿನ (ಶನಿವಾರ) ಮಧ್ಯಾಹ್ನ ೨ ಗಂಟೆಗೆ ಸ್ವಚ್ಚ ಮಂದಿರ ಸೇವಾ ಅಭಿಯಾನಕ್ಕೆ ಸಂಸದ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ.ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಮುಖ್ಯ ಅತಿಥಿಗಳಾಗಿದ್ದಾರೆ.ಬಳಿಕ ಸರ್ವರೂ ಸ್ವಚ್ಚತಾ ಸೇವೆ ನಡೆಸುವ ಮೂಲಕ ಅಭಿಯಾನವು ಪ್ರಾರಂಭಗೊಳ್ಳಲಿದೆ ಎಂದು ಮೋಹನರಾಂ ಸುಳ್ಳಿ ತಿಳಿಸಿದರು.
- Friday
- November 1st, 2024