ಮಾದಕ ದ್ರವ್ಯ ಜಾಲ ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂಥ ಕೃತ್ಯಗಳನ್ನು ನಾವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ . ಇದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು.
ಸುಳ್ಯದ ಯುವಜನ ಸಂಯುಕ್ತಮಂಡಳಿಯ ಸಭಾಂಗಣದಲ್ಲಿ ನಡೆದ ನೂತನ ಗೃಹರಕ್ಷಕ ದಳದ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ತಮ್ಮ ಕಾರ್ಯ ಕ್ಷೇತ್ರದಲ್ಲಿ ಉತ್ತಮವಾದ ಕಾರ್ಯನಿರ್ವಹಣೆ ಮಾಡಿ ಮೇಲ್ಪಂಕ್ತಿ ಹಾಕಿದಾಗ ಸರಕಾರ ಹಾಗೂ ಜನರು ಗೌರವ ನೀಡುತ್ತಾರೆ. ನಮ್ಮ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಲವು ರಕ್ಷಣಾ ವ್ಯವಸ್ಥೆ ಗಳನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಗೃಹರಕ್ಷಕ ದಳವೂ ಉತ್ತಮ ಸೇವೆ ನೀಡುತ್ತಿದೆ ಎಂದರು.
ವಿಶ್ವಾಸವಿಲ್ಲದ ವ್ಯವಸ್ಥೆ ಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರಕ್ಕೆ ನ್ಯಾಯ ಒದಗಿಸಿಕೊಡುವ ಕಾರ್ಯ ಮಾಡಬೇಕು.ಇದರಿಂದ ಜನರು ನೆಮ್ಮದಿಯಿಂದಿರಲು ಸಾಧ್ಯ ಎಂದರು.
ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಅವರು ಮಾತನಾಡಿ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಪೊಲೀಸರ ನಿರ್ದೇಶನದ ಪ್ರಕಾರ ಗೃಹರಕ್ಷಕ ದಳ ಕಾರ್ಯ ನಿರ್ವಹಿಸುತ್ತದೆ. ನಿಷ್ಕಾಮ ಸೇವೆಯೇ ಗೃಹರಕ್ಷಕ ದಳದ ಧ್ಯೇಯವಾಗಿದೆ.ಇವರ ಈ ಸೇವೆ ಸ್ಮರಣೀಯ ಎಂದರು.
ತಾ.ಪಂ.ಕಟ್ಟಡದಲ್ಲಿರುವ ಕಚೇರಿಯನ್ನು ಸಚಿವರು ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದ.ಕ. ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲಿ ಮೋಹನ ಚೋಂತಾರು, ಪದ್ಮಶ್ರೀ ಪುರಸ್ಕೃತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಭವಾನಿಶಂಕರ್, ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಪ್ರಮುಖರಾದ ಎಚ್.ಉಮ್ಮರ್, ರಾಮಕೃಷ್ಣ , ಜಯಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗೃಹರಕ್ಷಕ ದಳದ ದ.ಕ.ಉಡುಪಿ ಜಿಲ್ಲೆಯ ಉಪ ಸಮಾದೇಷ್ಟರಾದ ರಮೇಶ್ ಅವರು ಸ್ವಾಗತಿಸಿದರು.