ಬೆಳ್ಳಾರೆಯ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್(ರಿ.) ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಆ.27 ರಂದು ನಡೆಯಿತು. ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಝಿಯಾರತ್ ನಡೆಸಿ ಆ ಬಳಿಕ ಆಂಬ್ಯುಲೆನ್ಸ್ ಲೋಕಾರ್ಪಣೆಗೊಂಡಿತು. ಟ್ರಸ್ಟ್ ನ ಅಧ್ಯಕ್ಷ ಯು ಹೆಚ್ ಅಬೂಬಕ್ಕರ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಳಲಿ ಕೇಂದ್ರ ಜುಮಾ ಮಸೀದಿಯ ಖತೀಬರಾದ ತಾಜುದ್ದೀನ್ ರಹ್ಮಾನಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ಕೆ ಎಸ್ ಎಸ್ ಎಫ್ ದ.ಕ ಜಿಲ್ಲಾಧ್ಯಕ್ಷರಾದ ಅಮೀರ್ ತಂಙಳ್ ದುವಾಕೆ ನೇತೃತ್ವ ವಹಿಸಿದ್ದರು. ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿ ಸರಿಯಾದ ಧಾರ್ಮಿಕ ಶಿಕ್ಷಣ ದೊರೆತಾಗ ಯಾವುದೇ ರೀತಿಯ ಹಿಂಸಾತ್ಮಕ ಪ್ರವೃತ್ತಿ ಬೆಳೆಯಲು ಸಾಧ್ಯವೇ ಇಲ್ಲ, ಅಂತಹ ಉತ್ತಮ ಧಾರ್ಮಿಕ ಶಿಕ್ಷಣ ದೊರೆತಾಗ ಮಾತ್ರ ಇಂತಹ ಅತ್ಯುತ್ತಮ ಕಾರ್ಯ ನೆರವೇರಲು ಸಾಧ್ಯ ಎಂದು ಹೇಳಿದರು. ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಬಾಳಿಲ ಮಾತನಾಡಿ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ 2019 ಆಗಸ್ಟ್ ನಲ್ಲಿ ಆರಂಭಗೊಂಡಿದ್ದು ಕೇವಲ ಎರಡು ವರ್ಷಗಳಲ್ಲಿ ಜನರ ಮನಮುಟ್ಟುವಂತಹ ಅಭಿನಂದನಾರ್ಹ ಕಾರ್ಯಗಳನ್ನು ಮಾಡಿದ್ದು ದಿನನಿತ್ಯದ ಅಗತ್ಯ ವಸ್ತುಗಳಿಂದ ಹಿಡಿದು ಔಷಧಿಗಳ ತನಕ ಬಡಜನರ ಮನೆಮನೆಗೆ ತಲುಪಿಸಿದ್ದಲ್ಲದೇ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿದೆ. ಇದೀಗ ಲೋಕರ್ಪಣೆಗೊಂಡಿರುವ ಆಂಬ್ಯುಲೆನ್ಸ್ ಇಡೀ ಬೆಳ್ಳಾರೆಯ ಜನತೆಗೆ ಶಂಸುಲ್ ಉಲಮಾ ಟ್ರಸ್ಟ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ನೀಡಿದ ಕೊಡುಗೆಯಾಗಿದ್ದು ಎಲ್ಲಾ ವರ್ಗದ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ನೂರುಲ್ ಹುದಾ ಮಾಡನ್ನೂರು ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಟ್ರಸ್ಟ್‌ನ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಪನ್ನೆ , ಮಾಜಿ ಜಿ.ಪಂ ಸದಸ್ಯ ಚಂದ್ರಶೇಖರ ಕಾಮತ್ , ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್ , ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ವೈದ್ಯರಾದ ಡಾ.ತಿಲಕ್ ಎಸ್ ಭಟ್, ಡಾ.ರಿಝ್ವಾನ್, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಜಾಬಿರ್ ಫೈಝಿ ಬನಾರಿ, ಜಮಾಲ್ ಕಳಂಜ, ಟ್ರಸ್ಟ್ ನ ಪದಾಧಿಕಾರಿಗಳು ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
ಮಗ್ರಿಬ್ ನಮಾಝ್ ಬಳಿಕ ಶಂಸುಲ್ ಉಲಮಾ ನಗರದಲ್ಲಿ ಬೃಹತ್ ದುವಾ ಸಂಗಮವು ಅಹ್ಮದ್ ಪುಕೋಯ ತಂಙಳ್ ಪುತ್ತೂರು ಅವರ ನೇತೃತ್ವದಲ್ಲಿ ನಡೆಯಿತು.
ಟ್ರಸ್ಟಿ ಯು ಪಿ ಬಶೀರ್ ಸ್ವಾಗತಿಸಿ, ಕಾರ್ಯದರ್ಶಿ ಬಶೀರ್ ಕಲ್ಲಪಣೆ ವಂದಿಸಿದರು. ಪಿ ಎ ಮರ್ದಾಳ ಕಾರ್ಯಕ್ರಮವನ್ನು ನಿರೂಪಿಸಿದರು.