ಜೇಸಿಐ ಬೆಳ್ಳಾರೆ, ಯುವ ಜೇಸಿಐ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ – ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ಕ್ಷಯ ರೋಗ ಕುರಿತು ಜಾಗೃತಿ ಮೂಡಿಸುವ ಕಿರುಚಿತ್ರ ‘ಕ್ಷಯ ಮುಕ್ತ ಭಾರತ’ ಇದರ ವಿಶೇಷ ರಂಗ ತರಬೇತಿಯ ಉದ್ಘಾಟನೆ ಬೆಳ್ಳಾರೆ ಜೇಸಿ ಭವನದಲ್ಲಿ ಆ.23ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ನೆರವೇರಿಸಿ ಮಾತನಾಡಿ ಜೇಸಿ ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದ್ದು ಇಂತಹ ಉತ್ತಮ ಕಾರ್ಯಗಳಿಗೆ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ|ಬದ್ರುದ್ದೀನ್ ಎಂ.ಎನ್ ಕ್ಷಯ ರೋಗದ ಹರಡುವಿಕೆ ಹಾಗೂ ಲಕ್ಷಣಗಳ ಬಗ್ಗೆ ವಿವರಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಮಂಗಳೂರು ವಿಭಾಗದ ಸಲಹೆಗಾರರಾದ ಡಾ|ದೇವೀಗನ್.ಡಿ ತಳಮಟ್ಟದ ಜನರಿಗೆ ಕ್ಷಯರೋಗದ ಬಗ್ಗೆ ಅರಿವು ಮೂಡಬೇಕಾದ ಅಗತ್ಯತೆ ಇದೆ ಎಂದರು. ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆಯ ಬಗೆಗಿನ ಮಾಹಿತಿ ಪ್ರಚಾರವಾಗಬೇಕು ಎಂದರು. ಬೆಳ್ಳಾರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿಯವರ ಜೇಸಿ ಮತ್ತು ಆರೋಗ್ಯ ಇಲಾಖೆಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಂಗ ತರಬೇತುದಾರ ಕೃಷ್ಣಪ್ಪ ಬಂಬಿಲ ರಂಗಾಯಣದ ಮಹತ್ವದ ಬಗ್ಗೆ ವಿವರಿಸಿ ಇದರ ಮೂಲಕ ಸಾಮಾಜಿಕ ಜಾಗೃತಿ ಸಾಧ್ಯವಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಪದ್ಮನಾಭ ಕಲಾಸುಮ ವಹಿಸಿದ್ದರು. ಆರೋಗ್ಯ ಇಲಾಖೆಯ ಸುಳ್ಯ ಕ್ಷಯ ವಿಭಾಗ ಮೇಲ್ವಿಚಾರಕರಾದ ಜೇಸಿ ಲೋಕೇಶ್ ತಂಟೆಪ್ಪಾಡಿ ಪ್ರಾಸ್ತಾವಿಕ ಮಾತನ್ನಾಡಿದರು. ವೇದಿಕೆಯಲ್ಲಿ ಜೇಸಿ ನಿಕಟ ಪೂರ್ವಾಧ್ಯಕ್ಷ ವೀರನಾಥ್ ಕಲ್ಲೋಣಿ, ಕಾರ್ಯದರ್ಶಿ ಜೇಸಿ ಜಗದೀಶ್ ರೈ ಪೆರುವಾಜೆ ಉಪಸ್ಥಿತರಿದ್ದರು.
ಜೆಜೆ ಚೈತನ್ಯ ರೈ ಜೇಸಿ ವಾಣಿ ವಾಚಿಸಿದರು. ಜೇಸಿ ಪದ್ಮನಾಭ ಕಲಾಸುಮ ಸ್ವಾಗತಿಸಿ, ಜೇಸಿ ಜಗದೀಶ್ ರೈ ಪೆರುವಾಜೆ ವಂದಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಪೂರ್ವಾಧ್ಯಕ್ಷರುಗಳು, ಸದಸ್ಯರು, ಜೆಜೆ ಸದಸ್ಯರು, ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.