ನಾವು ನಮ್ಮ ಕಟ್ಟಡದಲ್ಲಿ ಬಾರ್ ತೆರೆದರೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಕ್ರಮ ಗಣಿಗಾರಿಕೆ ಎಂಬ ಹಣೆಪಟ್ಟಿ ನೀಡಿ ಹರ್ಷಿತ್ ಕೊರಂಬಟ ಮತ್ತು ನಿವೃತ್ತ ಪಿಡ್ಲ್ಯೂಡಿ ಇಂಜಿನಿಯರ್ ಗಿರೀಶ್ ಕೊರಂಬಟ ಎಂಬವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಸಿಕೊಂಡಿರುವ ಅಡ್ಕಾರು ವಿನೋಬನಗರದ ಭೋಜಪ್ಪ ನಾಯ್ಕ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೇವಿಪ್ರಸಾದ್ ಚಿಕ್ಮುಳಿ ಅವರು ಹೇಳಿದರು.
ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.
ನಾನು ನಿಯಮಗಳ ಪ್ರಕಾರವೇ ಕಲ್ಲು ಗಣಿಗಾರಿಕೆ ಮಾಡುತ್ತಿದ್ದೇನೆ. ಅದಕ್ಕೆ ಪೂರಕವಾದ ಎಲ್ಲಾ ದಾಖಲೆಗಳು ನನ್ನಲ್ಲಿ ಇವೆ. ನನ್ನ ಬಗ್ಗೆ ಊರಿನಲ್ಲಿಯೂ ಒಳ್ಳೆಯ ಅಭಿಪ್ರಾಯವಿದೆ. ಈ ಅಭಿಪ್ರಾಯ ಹರ್ಷಿತ್ ಮೇಲಿಲ್ಲ. ಗಣಿಗಾರಿಕೆಯ ಕುರಿತು ಹರ್ಷಿತ್ ನನ್ನ ಮೇಲೆ ನೀಡಿದ ಸುಳ್ಳು ದೂರಿನ ಅನ್ವಯ ಇಲಾಖೆಯ ಮೇಲಾಧಿಕಾರಿಗಳು ಭೇಟಿ ಮಾಡಿ ತನಿಖೆ ನಡೆಸಿದ್ದಾರೆ. ಆದರೆ ಅಧಿಕಾರಿಗಳು ಪ್ರಾಮಾಣಿಕರಾಗಿದ್ದ ಕಾರಣ ನನಗೆ ನ್ಯಾಯ ದೊರೆತಿದೆ ಎಂದರು. ಬೇರೆ ಬೇರೆ ಸಂಘಟನೆಗಳ ಮೂಲಕವೂ ದೂರು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳು ದೂರು ನೀಡುವ ಬದಲು ನೇರವಾಗಿ ಮಾತನಾಡಲಿ, ಇಲ್ಲದಿದ್ದರೆ ಸತ್ಯ ಪ್ರಮಾಣಕ್ಕೆ ಬರಲಿ ಎಂದು ದೇವಿಪ್ರಸಾದ್ ಅವರು ಸವಾಲೆಸೆದಿದ್ದಾರೆ. ತನ್ನ ಜೀವಕ್ಕೇನಾದರೂ ತೊಂದರೆ ಆದರೇ ಅವರೇ ನೇರ ಹೊಣೆಗಾರರು ಎಂದರು
ಗುತ್ತಿಗಾರು ಗ್ರಾಮವನ್ನು ಪುಷ್ಪಗಿರಿ ವನ್ಯಜೀವಿ ಪರಿಸರಕ್ಕೆ ಬರುತ್ತದೆ ಎಂದು ಸುಳ್ಳು ಹೇಳಿಕೊಂಡು ನನ್ನ ಜಾಗದ ಸರ್ವೆ ನಂಬರ್ ನೀಡಲಾಗಿದೆ. ನನ್ನ ಜಾಗ ವನ್ಯಜೀವಿ ವಿಭಾಗಕ್ಕೆ ಬರುವುದಾದರೇ ಇಡೀ ಗುತ್ತಿಗಾರು ಗ್ರಾಮವೇ ವನ್ಯಜೀವಿ ಸೂಕ್ಷ್ಮ ಪರಿಸರ ಎಂದಾಗುತ್ತದೆ ಅಲ್ಲವೇ. ವಾಸ್ತವದಲ್ಲಿ ಗುತ್ತಿಗಾರು ವನ್ಯಜೀವಿ ಪರಿಸರ ಸೂಕ್ಷ್ಮ ಪ್ರದೇಶ ಅಲ್ಲ. ಒಂದು ವೇಳೆ ಈ ದೂರಿನಿಂದ ಗುತ್ತಿಗಾರು ಗ್ರಾಮ ವನ್ಯಜೀವಿ ಪರಿಸರ ಸೂಕ್ಷ್ಮ ವಲಯ ಎಂದಾದರೆ ಇಡೀ ಗ್ರಾಮಕ್ಕೆ ತೊಂದರೆಯಾಗುತ್ತದೆ ಎಂದು ವಿವರಿಸಿದ ಅವರು ಕಲ್ಲುಗಾರಿಕೆ ಇಲಾಖೆಯಿಂದ ಮಾಲೀಕರಿಗೆ ಅನುಕೂಲವಾಗುವಂತೆ ವರದಿ ಎಂದು ಅಂಬೇಡ್ಕರ್ ಆಪದ್ಬಾಂಧವ ಟ್ರಸ್ಟ್ ಆರೋಪವನ್ನು ನಿರಾಕರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ ಚಿಕ್ಮುಳಿ, ಬಾಲಕೃಷ್ಣ ಚಿಕ್ಮುಳಿ, ಜಗದೀಶ ಚಿಕ್ಮುಳಿ ಉಪಸ್ಥಿತರಿದ್ದರು.