ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ಸುಳ್ಯಕ್ಕೆ ಬಂದಿದ್ದ ಸಂದರ್ಭದಲ್ಲಿ ತಾಳೆ ಬೆಳೆಗಾರರ ಸಮಸ್ಯೆಗಳ ಪರಿಹಾರದ ಬಗ್ಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಅಂತರ ರಾಷ್ಟ್ರೀಯ ಪಾಮ್ ಎಣ್ಣೆ ದರ ಆಧರಿಸಿ ಎಣ್ಣೆ ಹಾಗೂ ತಾಳೆ ಹಣ್ಣಿನ ಖರೀದಿ ದರ ನಿರ್ಧರಿಸಲಾಗುತ್ತದೆ.ಆ ಬೆಲೆ ಇಲ್ಲಿನ ಉತ್ಪಾದಕ ವೆಚ್ಚದ ಅನ್ವಯ ಲಾಭದಾಯಕವಾಗುವುದಿಲ್ಲ ಎಂದು ರಾಜ್ಯ ಸರಕಾರ ಪೂರಕ ಬೆಂಬಲ ಬೆಲೆ ಘೋಷಿಸಿತ್ತು. ಈ ಘೋಷಿತ ಬೆಂಬಲ ಬೆಲೆ ಅನ್ವಯ ರೈತರಿಗೆ 2019-20 ಮತ್ತು 2020-21 ಸಾಲಿನ ಹಣವನ್ನು ಶೀಘ್ರ ರಾಜ್ಯ ಸರಕಾರದಿಂದ ಬಿಡುಗಡೆ ಗೊಳಿಸಲಿಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಪ್ರಸಕ್ತ ಸಾಲಿನಲ್ಲಿ ಎಣ್ಣೆ ತಾಳೆ ಹಣ್ಣಿನ ಖರೀದಿ ದರ ಕೇಜಿಗೆ ಹದಿನೈದು ರುಪಾಯಿಗಳ ಆಸುಪಾಸಿನಲ್ಲಿದ್ದು ರೈತರಿಗೆ ಆಕರ್ಷಕ ಎನಿಸಿಕೊಳ್ಳುವಲ್ಲಿ ವಿಫಲವಾಗಿದೆ. ಕೇಂದ್ರ ಸರಕಾರದ ಖಾದ್ಯ ತೈಲ ಕೊರತೆ ನೀಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಹೆಚ್ಚು ರೈತರನ್ನು ಆಕರ್ಷಿಸುವ ದೃಷ್ಟಿಯಿಂದ ಬೆಂಬಲ ಬೆಲೆ ಮುಖಾಂತರ ಖರೀದಿ ದರ ಇನ್ನಷ್ಟು ಹೆಚ್ಚಿಸುವ ಯೋಜನೆ ಹಾಕಿಕೊಳ್ಳಬೇಕು. ಹಾಗೂ ಎಣ್ಣೆ ತಾಳೆ ಬೆಳೆ ಯಶಸ್ಸನ್ನು ಗಳಿಸಲು ತೋಟಗಳು ಒತ್ತೊತ್ತಾಗಿ ಕ್ಲಸ್ಟರ್ ಮಾದರಿ ಇರುವುದು ಅನುಕೂಲಕರ. ಅಡಿಕೆಯ ಹಳದಿ ಎಲೆ ರೋಗದಿಂದ ಕಂಗೆಟ್ಟ ಸುಳ್ಯ ತಾಲೂಕಿನಲ್ಲಿ ಎಣ್ಣೆ ತಾಳೆ ಬೆಳೆಯ ವಿಸ್ತರಣೆಗಾಗಿ ವಿಶೇಷ ಕ್ರಮಗಳನ್ನು ಹಮ್ಮಿಕೊಳ್ಳ ಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಶ್ರೀಮತಿ ಪ್ರೇಮಾ ವಸಂತ ಭಟ್ ,ರಮೇಶ ದೇಲಂಪಾಡಿ ಉಪಸ್ಥಿತರಿದ್ದರು.