ಶ್ರಾವಣ ಮಾಸವೆಂದರೆ ಹಬ್ಬಗಳ ಮೆರವಣಿಗೆಯೇ ಆಗಿದೆ. ಈ ಮಾಸದಲ್ಲಿ ಬರುವ ಒಂದು ವಿಶೇಷ ಹಬ್ಬವೇ ರಕ್ಷಾಬಂಧನ ಹಬ್ಬ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಹಬ್ಬ. ಇದು ಸಹೋದರ, ಸಹೋದರಿಯರ ನೆಚ್ಚಿನ ಹಬ್ಬ. ಭ್ರಾತೃತ್ವದ ಜವಾಬ್ದಾರಿಯನ್ನು ನೆನಪಿಸುವ ಹಬ್ಬ. ದೂರವಾದ ಸಂಬಂಧಗಳನ್ನು ಹತ್ತಿರ ಮಾಡುವ ಹಬ್ಬವೇ ರಕ್ಷಾಬಂಧನ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಪ್ರಚಲಿತವಾಗಿದ್ದ ರಾಖಿ ಸಂಭ್ರಮ ಇಂದು ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತಿದೆ. ನಮ್ಮ ಸಂಸ್ಕೃತಿಯಲ್ಲಿ ಈ ರಾಖಿಗೆ ವಿಶೇಷವಾದ ಮಹತ್ವವಿದೆ. ಸಮಾಜದ ದುಷ್ಟ ಶಕ್ತಿಯಿಂದ ರಕ್ಷಣೆಯನ್ನು ಸಹೋದರನಿಗೆ ನೆನಪಿಸುವ ಹಬ್ಬ. ಬಲಗೈಯ ಮುಂಗೈಗೆ ಕಟ್ಟುವ ರಕ್ಷೆಯ ದಾರವೇ ರಾಖಿ. ಹಲವು ಸಂದರ್ಭಗಳಲ್ಲಿ ರಾಖಿಯನ್ನು ಕಟ್ಟುವ ಸಂಪ್ರದಾಯವಿದೆ. ಯುದ್ಧಕ್ಕೆ ತೆರಳುವ ಯೋಧರ ಕೈಗೆ ರಕ್ಷೆಯನ್ನು ಕಟ್ಟಿ ಶುಭ ಹಾರೈಸುವ ಕ್ರಮವಿದೆ.
ಅಂದು ದ್ರೌಪದಿ ಕೃಷ್ಣನ ಕೈಗೆ ಗಾಯವಾದಾಗ ಹಿಂದು ಮುಂದೆ ನೋಡದೆ ತನ್ನ ವಸ್ತ್ರವನ್ನೇ ಹರಿದು ಕೈಗೆ ಕಟ್ಟುತ್ತಾಳೆ. ಆಕೆಯ ಈ ಕಾಳಜಿಯೇ ಮುಂದೆ ಕಾಯುತ್ತದೆ. ತನ್ನ ವಸ್ತ್ರದ ಮೇಲೆ ದುಶ್ಯಾಸನ ಕೈ ಹಾಕಿ ಸೆಳೆಯುತ್ತಿದ್ದಾಗ ಮಾನ ರಕ್ಷಣೆಗಾಗಿ ಕೃಷ್ಣನತ್ತ ಮುಖ ಮಾಡುತ್ತಾಳೆ. ಆ ಕ್ಷಣಕ್ಕೆ ಯುದ್ದಾಂಗಣದಲ್ಲಿದ್ದ ಕೃಷ್ಣ ದ್ಯೂತ ಸಭೆಯಲ್ಲಿ ನಡೆದ ಅವಮಾನದಿಂದ ದ್ರೌಪದಿಯನ್ನು ಕಾಪಾಡುತ್ತಾನೆ. ರಕ್ಷೆಯ ರಕ್ಷಣೆಯಲ್ಲವೇ ಇದು.
ಅಪಾಯಗಳು, ಕಷ್ಟಗಳು ಎದುರಾದಾಗ ಅವುಗಳನ್ನು ಎದುರಿಸಲು ಸಹೋದರರಿದ್ದಾರೆ ಎಂಬುದು ಮನಸಿಗೆ ಧೈರ್ಯ ಕೊಡುತ್ತದೆ. ಕೆಲವೊಮ್ಮೆ ಸ್ವಂತ ಅಣ್ಣ ತಮ್ಮಂದಿರು ಇರುವುದಿಲ್ಲ. ಹಾಗಿದ್ದೂ ಸಹಾಯಕ್ಕೆ ದೇವರು ಅಣ್ಣ ತಮ್ಮಂದಿರ ರೂಪದಲ್ಲಿ ಬರುತ್ತಾನೆ. ಊರವರಿರಬಹುದು, ಹತ್ತಿರದ ಬಂಧುಗಳಿರಬಹುದು, ಕ್ಲಾಸ್ ಮೇಟ್ ಗಳಿರಬಹುದು, ಜೊತೆ ಪ್ರಯಾಣಿಕರಿರಬಹುದು, ಸಹವರ್ತಿ ಕೆಲಸಗಾರರಿರಬಹುದು. ಕಷ್ಟಗಳು ಬಂದಾಗ ಯಾವುದಾದರೊಂದು ರೂಪದಲ್ಲಿ ಸಹೋದರರ ಸ್ಥಾನವನ್ನು ತುಂಬಿ ಬಿಡುತ್ತಾರೆ. ಯಾರು ನಮ್ಮ ಅಗತ್ಯಕ್ಕೆ , ಅನಿವಾರ್ಯತೆಗೆ ಸ್ಪಂದಿಸುತ್ತಾರೋ ಅವರೇ ಸಹೋದರ ಸಹೋದರಿಯರು.
ಸಹೋದರತೆಯ ಬಾಂಧವ್ಯವನ್ನು ಮತ್ತೆ ಮತ್ತೆ ನವೀಕರಿಸುತ್ತದೆ.
ನವನವೀನ ರಾಖಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ವಿಭಿನ್ನ ವಿನ್ಯಾಸಗಳಲ್ಲಿ ಲಭ್ಯವಿದೆ. ಅಂಗಡಿಗಳಲ್ಲೇ ರಾಖಿಯನ್ನು ಖರೀದಿಸುವ ಅಗತ್ಯವಿಲ್ಲ. ಸ್ವಲ್ಪ ಕ್ರಿಯಾಶೀಲರಾಗಿದ್ದರೆ ಕಲಾತ್ಮಕವಾಗಿ ನಾವೇ ಮಾಡಬಹುದು. ಮುತ್ತು ರತ್ನಗಳಿಂದ ಸಿಂಗರಿಸಬಹುದು, ಚಿನ್ನ ಬೆಳ್ಳಿಯ ರಾಖಿಗಳೂ ಲಭ್ಯವಿದೆ. ಒಣಬೀಜ, ಹಣ್ಣುಗಳಿಂದ ಸಿಂಗರಿಸಿದ ರಾಖಿಯನ್ನು ಹೊಸತಾಗಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇದು ಮಕ್ಕಳಿಗೆ ತುಂಬಾ ಇಷ್ಟವಾದ ರಕ್ಷಾ ಬಂಧನ ಹಬ್ಬ ಇದಾಗಲಿದೆ.
ರಾಖಿ ಹಬ್ಬದ ಶುಭಾಶಯಗಳು.
✍️ಅಶ್ವಿನಿಮೂರ್ತಿ ಅಯ್ಯನಕಟ್ಟೆ