ಚಾಂದ್ರಮಾನದ ಐದನೆಯ ತಿಂಗಳೇ ಶ್ರಾವಣ . ಈ ತಿಂಗಳಿನ ಆರಂಭದ ಹಬ್ಬವೇ ನಾಗರ ಪಂಚಮಿ. ನಮ್ಮ ನಾಡಿಗೆ ದೊಡ್ಡ ಹಬ್ಬ . ಪುರಾಣಗಳಲ್ಲಿಯೂ ಉಲ್ಲೇಖಿತವಾದ ನಮ್ಮ ಈ ಪರಶುರಾಮ ಸೃಷ್ಟಿಯ ವಿಶೇಷ ಹಬ್ಬವಿದು ಎನ್ನುವುದರಲ್ಲಿಯೇ ತುಂಬಾ ಔಚಿತ್ಯವಿದೆ.
ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನು ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಂದರ್ಥದಲ್ಲಿ ಪ್ರಕೃತಿಯ ಆರಾಧನೆ.
ನಾಗಾರಾಧನೆ ಇದೊಂದು ಪ್ರಾಚೀನ ಆರಾಧನೆ . ವೇದದ ಸೊಲ್ಲುಗಳು ನಾಗಪೂಜೆಯ ಪ್ರಾಚೀನತೆಯನ್ನು ತಿಳಿಯ ಪಡಿಸುತ್ತವೆ . ನಾಗ ದೇವರು ಅಗಣಿತ ಮಹಿಮೆಯ ಶಕ್ತಿಯೆಂದು ಸರ್ಪ ಸೂಕ್ತಗಳ ವರ್ಣನೆಯಿದೆ.
‘ “ಅನಂತಶ್ಚಾಸ್ಮಿ ನಾಗಾನಾಂ ” – ಶ್ರೀ ಕೃಷ್ಣ ಗೀತೆಯಲ್ಲಿ ತಿಳಿಸಿದ ಈ ಮಾತು ಸದಾ ಸ್ಮರಣೀಯವಾದುದು . ನಮ್ಮ ಭಾರತದ ಹರಪ್ಪ – ಮೊಹೆಂಜೊದಾರೋಗಳಲ್ಲಿ ಲಭ್ಯವಾದ ನಾಗ ಮುದ್ರೆಗಳು , ಗೋಕರ್ಣದ ನಾಗ ಬಂಧ ಚಿತ್ರ , ಬನವಾಸಿಯಲ್ಲಿರುವ ಕ್ರಿ . ಶ . ಮೂರನೆಯ ಶತಮಾನದ ನಾಗ ಪ್ರತೀಕಗಳು , ಶಿಲಾ ಶಾಸನಗಳಲ್ಲಿ ಕಾಣ ಸಿಗುವ ಹಾವಿನ ಚಿತ್ರಗಳು ಭಾರತದಲ್ಲಿ ಅನಾದಿಯಿಂದಲೂ ನಾಗ ದೇವರ ಬಗ್ಗೆ ಭಯ ಭಕ್ತಿಯಿತ್ತು ಎಂಬುದನ್ನು ಸಾರುತ್ತಲಿವೆ . ಪ್ರಾಚೀನ ಕಾಲದ ಕಾಷ್ಠ ಶಿಲ್ಪಗಳಲ್ಲಿರುವ ನಾಗ ಬಂಧದ ಸುಂದರ ದೃಶ್ಯ ಮನ ಮೋಹಕ . ದೇವರ ಪ್ರಭಾವಳಿ , ಆರತಿ ತಟ್ಟೆ , ಉದ್ಧರಣೆ ( ಸೌಟು ) , ಗರ್ಭ ಗೃಹದ ಮಾಡಿನ ಆಧಾರದ ಲೋಹದ ಆಕೃತಿಗಳು, ದೇವರ ವಿಗ್ರಹದ ಶಿರೋಭಾಗ ಇವೆಲ್ಲವುಗಳಲ್ಲಿ ನಾಗ ಸಂಕೇತಗಳನ್ನು ಗುರುತಿಸಬಹುದಾಗಿದೆ .
ವಿಧಿಯ ಆಟದಂತೆ ನಾಗಗಳು ಭೂಮಿಯಿಂದ ತಮ್ಮ ವಾಸ್ತವ್ಯದ ಸ್ಥಾನ ಬದಲಾಯಿಸಿಕೊಂಡು ಅನುಗ್ರಹ ಪಡೆದ ಅರ್ಥಾತ್ ಬದುಕು ರೂಪಿಸಿಕೊಂಡ ದಿನವೇ ಪಂಚಮಿ . ಹೀಗಾಗಿ ಪ್ರತಿ ತಿಂಗಳ ಶುಕ್ಲ ಪಂಚಮಿಗಳೂ ನಾಗರ ಪೂಜೆಗೆ ಹೇಳಿಸಿದ ತಿಥಿಗಳು , ಅದರಲ್ಲಿಯೂ ನಾಗರ ಪಂಚಮಿ ( ಶ್ರಾವಣ ಶುಕ್ಲ ಪಂಚಮಿ ) ಹಾಗೂ ಮಾರ್ಗಶಿರ ಶುಕ್ಲ ಪಂಚಮಿ ನಾಗಾರಾಧನೆಗೆ ಪುಣ್ಯಪ್ರದವೆಂಬ ಹೇಳಿಕೆ ಸ್ಕಾಂದ ಪುರಾಣದಲ್ಲಿದೆ .
ವಾಡಿಕೆಯಂತೆ ಶ್ರಾವಣ ಶುಕ್ಲ ಪಂಚಮಿಯೇ ನಾಗರ ಪಂಚಮಿಯೆಂದು ಖ್ಯಾತಿ ಪ್ರಖ್ಯಾತಿಗಳಿಸಿದೆ . ನಾಗದೇವರಿಗೆ ತನು ಹಾಕುವುದು ( ನಾಗ ದೇವರಿಗೆ ತಂಪೆರೆಯುವುದು ) ಈ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮ. ಪಂಚಾಮೃತಾಭಿಷೇಕ , ಶೀಯಾಳದ ಅಭಿಷೇಕ; ಹಾಲಿನ ಅಭಿಷೇಕ ನಾಗ ದೇವರಿಗೆ ವಿಶೇಷ ಪ್ರೀತಿಯನ್ನುಂಟು ಮಾಡುವುದು. ಅರಸಿನ ಹುಡಿ ನಾಗದೇವರಿಗೆ ಪ್ರೀತಿ ಕರ.
ಅರಶಿನ ಬಣ್ಣದ- ಸುಗಂಧ ಭರಿತ ಕೇದಗೆ , ಹಿಂಗಾರ ( ಪೂಗ ಪುಷ್ಪ ) ಸಂಪಿಗೆ ಇಂತಹ ಹೂಗಳು ಪೂಜಾರ್ಹ , ಅರಶಿನ ಎಲೆಯಲ್ಲಿ ಮಾಡಿದ ಭಕ್ಷವನ್ನು ತಯಾರಿಸಿ ಸ್ವೀಕರಿಸುವುದೂ ಈ ದಿನದ ವಿಶೇಷ . ಅಂತೂ ಮೂಲ ನಾಗಬನದಲ್ಲಿ ಅಥವಾ ಯಥಾ ಸಾಧ್ಯ ನಾಗ ಸನ್ನಿಧಿಯಲ್ಲಿ ಫಲ – ಪುಷ್ಪ – ಅಭಿಷೇಕ ದ್ರವ್ಯ – ಲಾವಂಚ ಧೂಪ ಇತ್ಯಾದಿ ಯಥಾ ಲಭ್ಯ ವಸ್ತುಗಳನ್ನು ಅರ್ಪಿಸಿ , ಪ್ರಾರ್ಥನಾ ಪೂರ್ವಕ ಪ್ರಸಾದ ಸ್ವೀಕರಿಸಿ , ಕೃತ ಕೃತ್ಯರಾಗುವುದೇ ಈ ದಿನದ ಧನ್ಯತೆಯ ಕಾರ್ಯಕ್ರಮ .ನಾಗಾಂತರ್ಗತ ಸಂಕರ್ಷಣ ರೂಪಿ ಪರಮಾತ್ಮನ ಪ್ರಸನ್ನತೆಯು ಸತ್ ಸಂತಾನವನ್ನು; ದೈವಿಕ ಸಂಪತ್ತನ್ನು ನೀಡುವುದರಲ್ಲಿ ಅನುಮಾನವಿಲ್ಲ.
ನಾವು ವಾಸವಾಗಿರುವ ಈ ಭೂಮಿಯನ್ನು ಹೊತ್ತ ದಿವ್ಯ ಶಕ್ತಿಯೇ ಆದಿ ಶೇಷ . ಹೀಗಾಗಿ ಈ ದಿನ ಮಣ್ಣನ್ನು ಅಗೆಯುವ , ಕಡಿಯುವ ಕೆಲಸ ವರ್ಜ್ಯ. ಸಾಸಿವೆ , ಪಡುವಲ ಕಾಯಿ ಈ ದಿನ ಬಳಸುವ ರೂಢಿಯಿಲ್ಲ . ಶ್ಯಾವಿಗೆ ಮಾಡುವಂತಿಲ್ಲ . ವಿಶೇಷ ಭಕ್ಷಗಳಾದ ಮೋದಕ , ಕಡುಬು , ತುಂಬಿಟ್ಟು ಮುಂತಾದವುಗಳನ್ನು ಹಬೆಯಲ್ಲಿಯೇ ಬೇಯಿಸುತ್ತಾರೆ. . ದೋಸೆ . ಹೊಯ್ಯುವ , ಒಗ್ಗರಣೆ ಹಾಕುವ ಹಾಗೂ ಕರಿಯುವ ಕ್ರಿಯೆಗಳಿಗೂ ಈ ದಿನ ವಿರಾಮ ನೀಡುತ್ತಾರೆ . ಇವೆಲ್ಲ ಜನಮನದ ನಂಬುಗೆಗಳು . ನಾವು ನಾಗ ದೇವರ ಕುರಿತು ಮೊದಲು ಅರಿತುಕೊಳ್ಳಬೇಕು . ಆಗ ಭಕ್ತಿ ಪ್ರೀತಿ ಹೆಚ್ಚಾಗುತ್ತದೆ . ಈ ತಿಳಿದು ಮಾಡುವ ಪೂಜೆಯಿಂದ ಆರೋಗ್ಯ , ಸತ್ಸಂತಾನ , ಸೌಭಾಗ್ಯ ಲಭಿಸುತ್ತದೆ . ನಾಗಬನ , ನಾಗ ಬೀದಿ , ಹುತ್ತ , ನಾಗ ಪರಿಸರ ಭಕ್ತಿ ಪ್ರಧಾನವಾದ ಈ ನಂಬಿಕೆಯಿಂದಲೂ ನಮ್ಮ ಪರಿಸರ ಭಾಗಶಃ ಶುದ್ಧವಾಗಿ ಉಳಿದು ಬರಲು ಸಹಾಯಕವಾಗಿದೆ . ಲೌಕಿಕವಾಗಿಯೂ ಇದು ನಾವು ಪಡೆದು ಬಂದ ಭಾಗ್ಯವೆನ್ನಬಹುದು . ವರ್ಷಕ್ಕೊಮ್ಮೆಯಾದರೂ ನಾಗಾರಾಧನೆಯ ನೆಪದಿಂದ ಕುಟುಂಬೀಯರು , ಊರವರು ಸಾಮೂಹಿಕವಾಗಿ ನಾಗಬನಗಳಲ್ಲಿ ನಾಗ ಕ್ಷೇತ್ರಗಳಲ್ಲಿ ಒಟ್ಟುಗೂಡಿ , ಸತ್ ಚಿಂತನೆಗಳಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಶ್ರೇಯಸ್ಕರ . ಮುಖ್ಯವಾಗಿ ಮುಂದಿನ ಜನಾಂಗ ಈ ಪೂಜಾ ಸಂಸ್ಕೃತಿಯಲ್ಲಿ ಪಾಲ್ಗೊಳ್ಳಬೇಕು . ಪರಿಸರ ಪ್ರಜ್ಞೆ ಅವರಲ್ಲಿ ಬೆಳೆಯಬೇಕು . ಜ್ಞಾನ , ಭಕ್ತಿ , ವೈರಾಗ್ಯ ಅವರಲ್ಲಿಯೂ ಅಂಕುರಿಸಬೇಕು . ಇದರಿಂದಲೇ ನಮ್ಮ ಸಂಸ್ಕೃತಿಯ ಸೌರಭ ಉಳಿಯಲು ಸಾಧ್ಯ . ಅನಂತ ಫಲದಾಯಕನೆಂಬ ಕೀರ್ತಿಯ ಅನಂತನೆಂಬ ನಾಮದ ಪರಮಾತ್ಮನು ನಮ್ಮ ಮನದಂತರಂಗದಾಳದಲ್ಲಿ ವಾಸಿಸಲಿಕ್ಕೂ ಇದೊಂದು ಸದವಕಾಶ .
ನಾಗನಿಗೇಕೀ ಮಹತ್ತ್ವ?
ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೇ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ನಿಧಿ ಸಂರಕ್ಷಕನು ಹೌದು….
ಸರ್ಪಗಳಿಗೆ ಸರಿಸೃಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.
ಸರ್ಪಗಳ ಜನ್ಮ
ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ…. ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು. ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ಪಂಚಮಿ, ಆಶ್ಲೇಷ ನಕ್ಷತ್ರ, ಷಷ್ಠಿಯದಿನ ನಾಗದೇವರ ಸಂಬಂಧಿ ನಕ್ಷತ್ರಗಳು
ಇಂತಹ ಪ್ರಶಸ್ತ ದಿನಗಳಲ್ಲಿ ನಾಗಾರಾಧನೆಯು ಉತ್ತಮ
ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷ ,ಸರಿಸೃಪನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಾರೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ನಾಗಾರಾಧನೆಯನ್ನು ಸರ್ಪ ಸಂಸ್ಕಾರವನ್ನು ಮಾಡಲಾಗುತ್ತದೆ.
ಯಾರು ಯಾವ ಸಂದರ್ಭದಲ್ಲಿ ಯಾಕೆ ಸರ್ಪ ಸಂಸ್ಕಾರ ಮಾಡಬೇಕು
ಕೆಲ ಜ್ಯೋತಿಷ್ಯರು ಜಾತಕ ನೋಡಿ ಸಾಮಾನ್ಯವಾಗಿ ದುಸ್ಥಾನಗಳಲ್ಲಿ (೬,೮,೧೨)ರಲ್ಲಿ ರಾಹು ಇದ್ದಾಗ ನಿಮಗೆ ಸರ್ಪ ದೋಷವಿದೆ.ಸರ್ಪ ಸಂಸ್ಕಾರ ಮಾಡಿಸಿ ಬನ್ನಿ ಎಂದು ಹೇಳುವುದು ವಾಡಿಕೆಯಾಗಿದೆ. ಆದರೆ ಒಂದು ವೇಳೆ ಸರ್ಪ ಸಾಯದೇ ಇದ್ದಲ್ಲಿ ಸರ್ಪ ಸಂಸ್ಕಾರ ಮಾಡುವುದು ಉಚಿತವೇ ಎಂಬುದು ಪ್ರಶ್ನೆಯಾಗುತ್ತದೆ. ಸಾಯದ ಜಂತುವಿಗೆ ಮರಣೋತ್ತರ ಕ್ರಿಯೆ ಮಾಡಿ ಅದನ್ನು ಎಲ್ಲಿಗೆ ಕಳುಹಿಸುತ್ತಾರೆ.? ಒಬ್ಬ ವ್ಯಕ್ತಿ ಸಾಯದೇ ಇದ್ದಾಗ ಉತ್ತರ ಕ್ರಿಯೆ ಮಾಡುವುದು ಸರಿಯೇ?
ಯಾವ ಸಂದರ್ಭದಲ್ಲಿ ಸರ್ಪ ಸಂಸ್ಕಾರ ಮಾಡಬೇಕು?
1.ಸರ್ಪನ ಮರಣ ನೋಡಿರಬೇಕು ಮತ್ತು ಅದಕ್ಕೆ ಸಂಸ್ಕಾರ ಆಗದೇ ಇರಬೇಕು.
- ಸ್ಥಳ ಭಾದಿತ ಸರ್ಪ ದೋಷಗಳು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದರೆ ಆಗ ಸರ್ಪ ಸಂಸ್ಕಾರ ಬೇಕು.
- ಹೊಸದಾಗಿ ನಾಗಬನ ಮಾಡುವುದಿದ್ದರೆ ಆಗ ಸರ್ಪ ಸಂಸ್ಕಾರದ ಮೂಲಕ ನಾಗ ಶಿಲಾ ಪ್ರತಿಷ್ಠೆಯಾಗಬೇಕು. ಭೂಮಿ ಎಂದ ಮೇಲೆ ಜೀವಿಗಳು ಪ್ರತೀ ಇಂಚು ಇಂಚಿಗೂ ಸತ್ತಿರುತ್ತದೆ.ಭೂಮಿಯು ಸ್ಮಶಾನವೇ ಆಗಿರುತ್ತದೆ. ಅದಕ್ಕಾಗಿ ಮರ್ತ್ಯಲೋಕ ಎಂದು ಕರೆದರು.ಇಂತಹ ಉದ್ಧಿಶ್ಯದಲ್ಲಿ ಸರ್ಪಸಂಸ್ಕಾರ ಮಾಡಿ ಭೂಮಿಯಲ್ಲಿ ನಿಧಿಸ್ಥಾಪಿಸಿ ನಾಗ ಪ್ರತಿಷ್ಠೆ ಮಾಡಬಹುದು.
- ವಾಹನಗಳ ಗಾಲಿಗಳಿಗೆ ನಾಗನು ಬಿದ್ದು ಸತ್ತಿದ್ದು ಕಂಡರೆ, ಯಾವುದೋ ನವಿಲೋ, ಗಿಡುಗನೋ, ಮುಂಗುಸಿಯೋ ಅಥವಾ ಇನ್ಯಾವ ಪ್ರಾಣಿ ಪಕ್ಷಿಗಳಿಂದ ನಾಗರ ಹಾವು ಸತ್ತಿದ್ದು ಕಂಡರೆ ಸಂಸ್ಕಾರ ಮಾಡಲೇ ಬೇಕು.
5.ನಾಗವಂಶದ ಸರಿಸೃಪಾದಿ ಅಂದರೆ ಇತರ ವಿಷಯುಕ್ತ ಹಾವುಗಳು ನಮ್ಮ ಕೈಯಲ್ಲಿ ಕೊಲ್ಲಲ್ಪಟ್ಟಿದ್ದರೆ ಅದು ನಾಗದೋಷವಾಗುತ್ತದೆ.ಆಗ ಇದರ ಉದ್ದಿಶ್ಯವಾಗಿ ಸಂಸ್ಕಾರ ಮಾಡಬಹುದು. - ನಾಗ ವನಗಳು ನಮ್ಮಿಂದಾಗಿ ಸುಟ್ಟು ಹೋಗಿದ್ದರೆ, ಧ್ವಂಸವಾಗಿದ್ದರೆ ಇಲ್ಲಿ ಅಗೋಚರವಾಗಿ ಸರ್ಪ ಸಂತತಿ ನಾಶವಾಗಿರಬಹುದು.ಇಂತಹ ವಿಚಾರವಿದ್ದಾಗ ಸಂಸ್ಕಾರ ಮಾಡಬೇಕು.
(ಸಂಗ್ರಹ: ಜಾಲತಾಣ)