ಸುಳ್ಯ: ಕೊರೊನಾ ಪಾಸಿಟಿವ್ ಬಂದ ವಹಿನ್ನೆಲೆ ಮಗರಾಯನೊಬ್ಬ ತನ್ನ ಹೆತ್ತ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ನಾಪತ್ತೆಯಾದ ಘಟನೆ ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ವರದಿಯಾಗಿದೆ.
ಸುಳ್ಯ ಪರಿಸರದಲ್ಲಿ ಬಳೆ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿರುವ ರಾಜೇಶ್ವರಿ ಮತ್ತು ವಿನಯ ಕುಮಾರ್ ಅವರು ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಅವರಿಗೆ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು.ಇದರಿಂದಾಗಿ ಕ್ವಾರಂಟೈನ್ ಆಗಬೇಕು ಎಂಬ ನಿಯಮ ಪಾಲಿಸಬೇಕೆಂಬ ಕಾರಣಕ್ಕೆ ಶನಿವಾರದಂದು ವೃದ್ದ ತಾಯಿಯನ್ನು ಮನೆಯೊಳಗೇ ಕೂಡಿಹಾಕಿ ನಾಪತ್ತೆಯಾಗಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆ ಸ್ಥಳೀಯರಿಗೆ ಕೊಠಡಿಯ ಒಳಗಡೆಯಿಂದ ವೃದ್ದೆಯ ಕೂಗಾಡುವ ಶಬ್ದ ಕೇಳಿ ಬಂದಿತ್ತು. ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುಳ್ಯ ಠಾಣಾ ಎಸ್.ಐ.ಹರೀಶ್‍ರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರಿದ್ದು ಬಾಗಿಲು ತೆರೆದು ವೃದ್ದೆಯನ್ನು ಉಪಚರಿಸಿದ್ದಾರೆ. ಎರಡು ದಿನದಿಂದ ಉಪವಾಸದಲ್ಲಿದ್ದ ವೃದ್ದೆಗೆ ಆಹಾರ- ನೀರಿನ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ನೇತ್ರತ್ವದಲ್ಲಿ ವೃದ್ದೆಯ ಆರೋಗ್ಯ ತಪಾಸಣೆ ನಡೆಸಲಾಗಿದೆ.
ನಾಪತ್ತೆಯಾದ ದಂಪತಿಯ ದೂರವಾಣಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಎಲ್ಲಿಗೆ ಹೋಗಿದ್ದಾರೆಂದೂ ತಿಳಿದುಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.