*✒️ಸುದೀಪ್ ರಾಜ್ ಸುಳ್ಯ*
ಕೊರೊನಾ ಮತ್ತೆ ಜಾಸ್ತಿಯಾಗ್ತಾ ಇದೆ. ಮೊದಲನೇ ಅಲೆ ಬಂದಾಗಲಾದರೂ ಅದು ಹೊಸ ರೋಗ. ಇಂಥ ರೋಗವಿದೆ ಎಂಬ ಊಹೆಯನ್ನೂ ನಾವ್ಯಾರೂ ಮಾಡುವಂತಿರಲಿಲ್ಲ .ಲಾಕ್ ಡೌನ್ ಅನಿವಾರ್ಯವಾಯ್ತು. ಮಾರುಕಟ್ಟೆ ಮಲಗಿತು, ಸಿನಿಮಾ, ಪ್ರವಾಸ, ವಿದೇಶಿಯಾತ್ರೆ, ಐಟಿ ಉದ್ಯಮ ಸೇರಿದಂತೆ ಎಲ್ಲವೂ ೪ ತಿಂಗಳ ಕಾಲ ನಿಂತುಹೋಯಿತು. ಇದರಿಂದಾಗಿ ದೇಶದ ಬೊಕ್ಕಸವೂ ಬರಿದಾಯಿತು.
ಜೂನ್ 2020 ಕ್ಕೆ ಮೊದಲನೇ ಅಲೆಯ ಭೀಕರತೆ ಕಡಿಮೆಯಾಗುತ್ತಾ ಸಾಗಿತು. ಆದರೆ ಮೊದಲನೇ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ಜನ ಮೈಮರೆತರು. ಮಾಸ್ಕ್ ಬಿಟ್ಟರು. ಸರಕಾರ ಸುಮ್ಮನೇ ಲಾಕ್ ಡೌನ್, ಕರ್ಫ್ಯೂ ಮಾಡಿದ್ದು, ಕೊರೊನಾ ಗಿರೋನಾ ಎಲ್ಲಾ ಸುಳ್ಳು ಎಂದು ಜರೆದರು. ಜನರು ಹೀಗಾಡುತ್ತಿರುವಾಗಲೇ ಎರಡನೇ ಅಲೆ ಇಂಗ್ಲೆಂಡ್, ಅಮೇರಿಕಾ ಸೇರಿದಂತೆ ವಿದೇಶಗಳಿಗೆ ಅಪ್ಪಳಿಸಿತು. ಆಗಲೂ ನಮ್ಮ ದೇಶ ಎಚ್ಚೆತ್ತುಕೊಳ್ಳಲಿಲ್ಲ. ವಿದೇಶದಲ್ಲಿ ಸಾವಿನ ವರದಿಗಳಾಗುತ್ತಿರುವಾಗ ನಮ್ಮವರು ಇಲ್ಲಿ ಚಿಕನ್, ಮಟನ್ ಬೇಕು ಎಂದು ಮಾರುಕಟ್ಟೆಗೆ ಮುಗಿಬಿದ್ದರು. ಎರಡನೇ ಅಲೆ ಅಪ್ಪಳಿಸಿ ರಾಜ್ಯ ಮತ್ತೆ ಲಾಕ್ ಡೌನ್ ಆಯಿತು. ಆದರೆ ನಮ್ಮ ಜನ ಮಾತ್ತ ಇದಕ್ಕೂ ಜಗ್ಗಲಿಲ್ಲ ಬಗ್ಗಲಿಲ್ಲ. ಪೇಟೆಗೆ ಮಾಸ್ಕ್ ಇಲ್ಲದೇ ಬಂದದ್ದೇ ಬಂದದ್ದು. ಸಾಮಾಜಿಕ ಅಂತರ ಮರೆತದ್ದೇ ಮರೆತದ್ದು. ಇದರ ಪರಿಣಾಮ ಅನುಭವಿಸಿದ್ದು ಮಾತ್ರ ಅರ್ಧ ಬದುಕು ಮುಗಿಸಿದ್ದ ಹಿರಿ ಜೀವಗಳು.
ಸದ್ಯ ೨ನೇ ಅಲೆ ನಿಯಂತ್ರಣಕ್ಕೆ ಬಂದು ಜನಜೀವನ ಸಹಜ ಸ್ಥಿತಿಗೆ ಬರುವ ಮೊದಲೇ ಮತ್ತೆ ಜನ ನಿಯಮ ಮರೆತಿದ್ದಾರೆ. ಮಾಸ್ಕ್ ಬಿಟ್ಟಿದ್ದಾರೆ. ಈಗ ಮತ್ತೆ ೩ ನೇ ಅಲೆ ಸುದ್ದಿ ಮಾಡುತ್ತಿದೆ. ಈಗಾಗಲೇ ಸರಕಾರ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದು ಆರ್ಥಿಕತೆಗೆ ಇನ್ನೆಷ್ಟು ಪೆಟ್ಟುಕೊಡುತ್ತದೆ. ಎಷ್ಟು ಬಲಿಪಡೆಯುತ್ತದೆ ಎಂಬುದನ್ನು ಕಾದುನೋಡಬೇಕಷ್ಟೇ.