ಕೆವಿಜಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಂಜಿನಿಯರ್ಸ್ ಡೇ ಆಚರಣೆ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ಎನ್.ಎಸ್.ಎಸ್. ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ತಂಡದ ಸಹಯೋಗದೊಂದಿಗೆ ‘ಇಂಜಿನಿಯರ್ಸ್ ಡೇ’ ಕಾರ್ಯಕ್ರಮವನ್ನು ಸೆ.15ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೈಂಟ್ ಮೇರಿಸ್ ಇಂಡಸ್ಟೀಸ್‌ನ ಸಂಸ್ಥಾಪಕ ಇಂಜಿನಿಯರ್ ಜೆಮಿನ್ ಜೋಸೆಫ್ ಮಾತನಾಡಿ “ಸೆ.15ರಂದು ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಅಂಗವಾಗಿ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ. ವಿಶ್ವೇಶ್ವರಯ್ಯ ಅವರು ಜಲಾಶಯಗಳ ನಿರ್ಮಾಣ, ತೂಗು ಸೇತುವೆಗಳ ನಿರ್ಮಾಣ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಪೂರಕವಾದ ಅನೇಕ ಮಹತ್ವದ ಕಾರ್ಯಗಳನ್ನು ತಮ್ಮ ಜೀವನದಲ್ಲಿ ಕೈಗೊಂಡಿದ್ದರು” ಎಂದು ತಿಳಿಸುತ್ತಾ “ಅವರ ಆದರ್ಶಗಳನ್ನು ಪಾಲಿಸಿ, ಸಮಾಜದ ಏಳಿಗೆಗೆ ಉತ್ತಮಕೊಡುಗೆ ನೀಡಬೇಕು” ಎಂದು ಕರೆ ನೀಡಿದರು.

. . . . . . . . .

ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ.ವಿ ಮಾತನಾಡಿ “ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಕರ್ನಾಟಕದಲ್ಲಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1934ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಲಾದ ಹಲವು ಯೋಜನೆಗಳ ಸಮಿತಿಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ‘Knight Commander of the British Indian Empire’ ಗೌರವವನ್ನು ನೀಡಲಾಯಿತು” ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ನೆರೆದಿದ್ದ ಪ್ರತೀ ವಿದ್ಯಾರ್ಥಿಯನ್ನು ಹುರಿದುಂಬಿಸಿದರು.

. . . . . . .

ಉಪಪ್ರಾಂಶುಪಾಲ ಡಾ. ಶ್ರೀಧರ್.ಕೆ ಅವರು ಮಾತನಾಡಿ “ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು 1955ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನಕ್ಕೆ ಪಾತ್ರರಾದರು. ಪ್ರತಿಯೊಬ್ಬರೂ ಉತ್ತಮ ಇಂಜಿನಿಯರ್‌ಗಳಾಗಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸುವುದರ ಜೊತೆಗೆ ಸಮಾಜದ ಒಳಿತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು” ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಇಂಜಿನಿಯರ್ಸ್ ಡೇ ಪ್ರಯುಕ್ತ ಕಾರ್ಯಕ್ರಮದ ಮುಖ್ಯ ಅತಿಥಿ ಇಂಜಿನಿಯರ್ ಜೆಮಿನ್ ಜೋಸೆಫ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಅರುಣ್ ಕುಮಾರ್ ಹೆಚ್. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಭಿಜ್ಞ ಬಿ.ಬಿ. ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಲೋಕೇಶ್ ಪಿ.ಸಿ. ಸ್ವಾಗತಿಸಿ, ಎನ್.ಎಸ್.ಎಸ್. ಘಟಕಾಧಿಕಾರಿ ಪ್ರೊ. ಸತ್ಯಜಿತ್ ಎಂ. ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading