ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಭುವನೇಶ್ವರಿ ಕೆ. ಅವರ ಪರಿಚಯ

ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವುದರೊಂದಿಗೆ ಶಾಲಾ ಅಭಿವೃದ್ಧಿಗೆ ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಹಲವು ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿರುವ ಎಣ್ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕೆ. ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

. . . . . . . . .

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ದಿ. ವಾಡ್ಯಪ್ಪ ಗೌಡ ಹಾಗೂ ದಿ. ಲಕ್ಷ್ಮೀ ದಂಪತಿಯ ಕಿರಿಯ ಪುತ್ರಿಯಾಗಿ 1971ರ ಜನವರಿ 25ರಂದು ಜನಿಸಿದ ಭುವನೇಶ್ವರಿ ಅವರು ಪೆರ್ಲಂಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪೆರ್ಲಂಪಾಡಿಯ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ಮಂಗಳೂರಿನ ಬಲ್ಮಠದ ಮಹಿಳಾ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿ ಪಡೆದು 1994ರ ಜುಲೈ 27ರಂದು ಕೊಳ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು.

. . . . . . .

ಕೊಳ್ತಿಗೆ ಶಾಲೆಯಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿದ ಬಳಿಕ 1998ರ ಸೆಪ್ಟೆಂಬರ್ 2ರಂದು ಎಡಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 2016ರ ಸೆಪ್ಟೆಂಬರ್ 3ರಂದು ಎಣ್ಣೂರು ಕ್ಲಸ್ಟರ್‌ನ ಮುರುಳ್ಳ ಗ್ರಾಮದ ಕಾಯರ್ತಡ್ಕ ಶಾಲೆಗೆ ವರ್ಗಾವಣೆಗೊಂಡು, ಬಳಿಕ ಮಾನ್ಯಡ್ಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆಗೊಂಡು 2022ರ ಮೇ 25ರವರೆಗೆ ಕರ್ತವ್ಯ ನಿರ್ವಹಿಸಿದರು.

ಮಾನ್ಯಡ್ಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 2017ರಲ್ಲಿ ಶಾಲೆಯ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವುದರ ಜೊತೆಗೆ ಆಟದ ಮೈದಾನ ವಿಸ್ತರಣೆ, ಆವರಣ ಗೋಡೆ ನಿರ್ಮಾಣ, ಶಾಲೆಗೆ ಸುಣ್ಣ-ಬಣ್ಣ, ದಾನಿಗಳ ಸಹಕಾರದಿಂದ ತರಗತಿ ಕೊಠಡಿ ಹಾಗೂ ಕಚೇರಿಗೆ ಪೀಠೋಪಕರಣಗಳ ಪೂರೈಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಇವರ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ನೀಡಲಾಗುವ ‘ನೆಶನ್ ಬಿಲ್ಡರ್’ ಪ್ರಶಸ್ತಿಯನ್ನು 2021-22ನೇ ಸಾಲಿನಲ್ಲಿ ಪಡೆದಿದ್ದರು.

2022ರ ಮೇ 9ರಂದು ಮುಖ್ಯಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಎಣ್ಮೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಭುವನೇಶ್ವರಿ ಅವರು ಶಾಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರು. ಸಮುದಾಯದ ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

2024-25ನೇ ಶೈಕ್ಷಣಿಕ ಸಾಲಿನಲ್ಲಿ ನ್ಯೂಟ್ರಿಫಿಟ್ಸ್ ಅಂಡ್ ಫಾರ್ಮ್ ಪ್ರೈವೇಟ್ ಲಿಮಿಟೆಡ್‌ನಿಂದ ರೂ.30 ಲಕ್ಷ ಅನುದಾನ ಪಡೆದು ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಲವು ಕೆಲಸಗಳನ್ನು ಕೈಗೊಂಡರು. ಎಲ್ಲಾ ತರಗತಿ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಕಂಪ್ಯೂಟರ್, ಟಿವಿ ಹಾಗೂ ಲ್ಯಾಪ್‌ಟಾಪ್‌ಗಳ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಕ್ರೀಡಾ ಉಪಕರಣಗಳು, ಉಯ್ಯಾಲೆ, ಜಾರುಬಂಡಿ ಸೇರಿದಂತೆ ವಿವಿಧ ಪರಿಕರಗಳ ಅಳವಡಿಕೆ, ಹೊಸ ವೈರಿಂಗ್ ವ್ಯವಸ್ಥೆ, ತರಗತಿ ಕೊಠಡಿಗಳ ಮೇಲ್ಛಾವಣಿಗೆ ಶೀಟ್ ಅಳವಡಿಕೆ, ಶಾಲಾ ಮೈದಾನಕ್ಕೆ ಇಂಟರ್‌ಲಾಕ್ ಅಳವಡಿಕೆ, ರಂಗವೇದಿಕೆ ದುರಸ್ತಿ ಹಾಗೂ ತರಗತಿ ಕೊಠಡಿಗಳಿಗೆ ಹೊಸ ಬಾಗಿಲು-ಕಿಟಕಿಗಳ ಅಳವಡಿಕೆ ಮಾಡಲಾಗಿದೆ.

ಅಲ್ಲದೆ ಕಚೇರಿಗೆ ಟೇಬಲ್, ಚೇರ್‌ಗಳ ವ್ಯವಸ್ಥೆ, ಊರಿನ ದಾನಿಗಳ ಸಹಕಾರದಿಂದ ಹೂವಿನ ತೋಟ ನಿರ್ಮಾಣ, ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಪ್ರಾಜೆಕ್ಟರ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆ, ವೈಫೈ ಸಂಪರ್ಕ, ಎಂಆರ್‌ಪಿಎಲ್ ವತಿಯಿಂದ ರೂ.7 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ವಹಣೆ, ಸಂಘ-ಸಂಸ್ಥೆಗಳ ಸಹಕಾರದಿಂದ ನೀರಿನ ಟ್ಯಾಂಕ್ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರತಿವರ್ಷ ಊರಿನ ದಾನಿಗಳ ನೆರವಿನಿಂದ ಉಚಿತ ನೋಟ್ ಪುಸ್ತಕ, ಸಮವಸ್ತ್ರ, ಐಡಿ ಕಾರ್ಡ್ ಹಾಗೂ ಬೆಲ್ಟ್ ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಎಡಮಂಗಲ ಗ್ರಾಮ ಪಂಚಾಯಿತಿ ಹಾಗೂ ಊರಿನ ದಾನಿಗಳ ಸಹಕಾರದಿಂದ ಶಾಲೆಗೆ ಸುಣ್ಣ-ಬಣ್ಣ, ಮಳೆಹಾನಿ ಯೋಜನೆಯಡಿ ರೂ.6 ಲಕ್ಷ ಅನುದಾನದಲ್ಲಿ ಕಟ್ಟಡ ದುರಸ್ತಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

2022-23ನೇ ಶೈಕ್ಷಣಿಕ ವರ್ಷದಿಂದ ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರದಿಂದ ಸುಮಾರು ರೂ.40 ಲಕ್ಷದಷ್ಟು ಧನಸಂಗ್ರಹ ಮಾಡಿ ಶಾಲಾ ಕಟ್ಟಡದ ಸೌಂದರ್ಯೀಕರಣ, ಕಂಪ್ಯೂಟರ್ ತರಗತಿ, ಮೇಲ್ಛಾವಣಿಗೆ ಶೀಟ್ ಅಳವಡಿಕೆ, ಶಾಲೆಯ ಮುಂಭಾಗದಲ್ಲಿ ಹೂವಿನ ತೋಟ ಹಾಗೂ ತೆಂಗಿನ ತೋಟ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸಿರುವುದು ಇವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.

ಶಿಕ್ಷಣದ ಗುಣಮಟ್ಟದ ಜೊತೆಗೆ ಶಾಲೆಯ ಭೌತಿಕ ಅಭಿವೃದ್ಧಿಗೂ ಆದ್ಯತೆ ನೀಡಿ, ಸಮುದಾಯದ ಸಹಭಾಗಿತ್ವದ ಮೂಲಕ ಸರ್ಕಾರಿ ಶಾಲೆಯೊಂದನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ಭುವನೇಶ್ವರಿ ಕೆ. ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಅವರ ಶೈಕ್ಷಣಿಕ ಸೇವೆಗೆ ಸಂದ ಗೌರವವಾಗಿದೆ.

ಭುವನೇಶ್ವರಿ ಕೆ. ಅವರ ಪತಿ ಬಾಲಕೃಷ್ಣ ಕೆ. ನಿವೃತ್ತ ಮುಖ್ಯಶಿಕ್ಷಕರಾಗಿದ್ದು, ಪುತ್ರ ಕಾರ್ತಿಕ್ ಬಿ.ಕೆ. ಇನ್‌ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಶ್ರೀಮತಿ ರಕ್ಷಿತಾ ಬಿ.ಕೆ. ವಿವಾಹಿತರಾಗಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading