ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಜಾಥಾ – “ವ್ಯಸನಮುಕ್ತ ಜೀವನವೇ ಆರೋಗ್ಯಕರ ಸಮಾಜದ ಅಡಿಪಾಯ” : ಪಿ.ಎಸ್‌.ಐ ಅಂಜನೇಯ ರೆಡ್ಡಿ

ಸುಬ್ರಹ್ಮಣ್ಯ : ಕರ್ನಾಟಕ ಪೊಲೀಸ್ ಇಲಾಖೆಯ ವತಿಯಿಂದ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಬುಧವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭವ್ಯ ಜಾಗೃತಿ ಜಾಥಾ ನಡೆಯಿತು. ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪಿ.ಎಸ್‌.ಐ ಅಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ, ಕುಕ್ಕೆ ಸುಬ್ರಹ್ಮಣ್ಯ ಆಟೋ ಚಾಲಕ-ಮಾಲಕರ ಸಂಘ, ಟ್ಯಾಕ್ಸಿ ಚಾಲಕ-ಮಾಲಕರ ಸಂಘ, ಬಿ.ಎಂ.ಎಸ್ ಆಟೋ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದರು. ರಥಬೀದಿಯಿಂದ ಆರಂಭವಾದ ಜಾಥಾವು ಕಾಶಿಕಟ್ಟೆ ಮಾರ್ಗವಾಗಿ ಸಂಚರಿಸಿ ಮತ್ತೆ ದೇವಸ್ಥಾನದ ರಥಬೀದಿಯಲ್ಲಿ ಸಮಾಪ್ತಿಗೊಂಡಿತು. ಜಾಥಾದಲ್ಲಿ ಭಾಗವಹಿಸಿದವರು ತಂಬಾಕು, ಮದ್ಯಪಾನ, ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‌ಐ ಅಂಜನೇಯ ರೆಡ್ಡಿ “ಮಾದಕ ದ್ರವ್ಯಗಳ ವ್ಯಸನವು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಶಾಂತಿಗೆ ದೊಡ್ಡ ಅಪಾಯವಾಗಿದೆ. ತಂಬಾಕು ಮತ್ತು ಮದ್ಯಪಾನದಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಬಳಕೆಯಿಂದ ಯುವಜನರ ಭವಿಷ್ಯ ಹಾಳಾಗುವುದಲ್ಲದೆ ಅಪರಾಧ ಚಟುವಟಿಕೆಗಳಿಗೆ ಪ್ರೇರಣೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಪ್ರತಿಯೊಬ್ಬರೂ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನ ನಡೆಸಬೇಕು” ಎಂದು ಕರೆ ನೀಡಿದರು.

. . . . . . . . .

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಯಾವುದೇ ರೀತಿಯ ಮದ್ಯ, ತಂಬಾಕು ಅಥವಾ ಇತರ ವ್ಯಸನಗಳಿಗೆ ಒಳಗಾಗದೆ ಉತ್ತಮ ಜೀವನ ನಡೆಸುತ್ತಿರುವ ಆಟೋ ಚಾಲಕರಾದ ಅನಿಲ್, ರಾಧಾಕೃಷ್ಣ ಹಾಗೂ ಟ್ಯಾಕ್ಸಿ ಚಾಲಕರಾದ ಉದಯ ಶೆಟ್ಟಿ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ವತಿಯಿಂದ ಪಿ.ಎಸ್‌.ಐ ಅಂಜನೇಯ ರೆಡ್ಡಿ ಸನ್ಮಾನಿಸಿದರು. ವ್ಯಸನಮುಕ್ತ ಜೀವನ ನಡೆಸುತ್ತಿರುವ ಇವರನ್ನು ಇತರರಿಗೆ ಮಾದರಿಯಾಗಿ ಗುರುತಿಸಿ ಗೌರವಿಸಲಾಯಿತು. ಸಮಾಜದಲ್ಲಿ ವ್ಯಸನಮುಕ್ತ ಜೀವನದ ಮಹತ್ವವನ್ನು ಸಾರುವ ಈ ಸನ್ಮಾನ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಜಾಗೃತಿ ಜಾಥಾದ ಮೂಲಕ ಮಾದಕ ದ್ರವ್ಯಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading