ವಿಶ್ವ ಯೋಗ ದಿನಾಚರಣೆ ಪ್ರಯುಕ್ತ “ಯೋಗ ವಿದ್ ಯೋಧ” ಕಾರ್ಯಕ್ರಮ – ಜೂ.21ರಂದು ಕಾರಿಂಜೇಶ್ವರ ಬೆಟ್ಟದಲ್ಲಿ ಬೃಹತ್‌ ಯೋಗಾಭ್ಯಾಸ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ಭೂಕೈಲಾಸವೆಂದೇ ಪ್ರಸಿದ್ಧವಾದ ಐತಿಹಾಸಿಕ ಶ್ರೀ ಕ್ಷೇತ್ರ ಕಾರಿಂಜೇಶ್ವರದಲ್ಲಿ “ಯೋಗ ವಿದ್ ಯೋಧ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. 

. . . . . . . . .

ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾದ ಹಾಗೂ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿಯಲ್ಲಿರುವ ಪ್ರಕೃತಿ ರುದ್ರ ರಮಣೀಯ ಪ್ರದೇಶ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆವರಣದಲ್ಲಿ ಜೂ.21ರ ಭಾನುವಾರ ಅಪರಾಹ್ನ 3:00 ಗಂಟೆಗೆ ನಡೆಯಲಿರುವ 3ನೇ ಆವೃತ್ತಿಯ “ಯೋಗ ವಿದ್ ಯೋಧ” ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಸದರು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದಾರೆ.

. . . . . . .

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭಗೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಯು, ವಿಶ್ವದಾದ್ಯಂತ 180ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲ್ಪಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಈ ಬಾರಿಯ ಆಚರಿಸಲಾಗುತ್ತಿರುವ 12ನೇ ವಿಶ್ವ ಯೋಗ ದಿನದ ಧ್ಯೇಯವಾಕ್ಯವು “ಆರೋಗ್ಯಕರ ವಯಸ್ಸಿಗೆ ಯೋಗ”(Yoga for Healthy Ageing)”ಆಗಿದ್ದು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗದ ಪಾತ್ರ ಅಪಾರವಾಗಿದೆ. ಪ್ರಕೃತಿ ಸೌಂದರ್ಯದ ನಡುವೆ ಕಂಗೊಳಿಸುವ ಕಾರಿಂಜೇಶ್ವರ ಕ್ಷೇತ್ರದ ಬೆಟ್ಟದ ಆವರಣದಲ್ಲಿ ನಡೆಯಲಿರುವ ಯೋಗಪಟು ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಯೋಗಾಭ್ಯಾಸದಲ್ಲಿ, ವಿದ್ಯಾರ್ಥಿಗಳು, ನಿವೃತ್ತ ಯೋಧರು, ಗಣ್ಯರು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಕೃತಿಯ ಮಡಲಿನಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಚೈತನ್ಯವನ್ನು ಪಡೆದುಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ “ಯೋಗ ವಿದ್ ಯೋಧ” ಕಾರ್ಯಕ್ರಮವನ್ನು ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಆಯೋಜಿಸಲಾಗುತ್ತಿದೆ. ಪ್ರಥಮ ಬಾರಿ ಸಾಹಸ ಜಲಕ್ರೀಡೆಗಳ ತಾಣವಾಗಿರುವ ಸಸಿಹಿತ್ಲುವಿನಲ್ಲಿ ಹಾಗೂ ಕಳೆದ ಬಾರಿ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಕಡಲ ಕಿನಾರೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಬಾರಿ ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿರುವ ಕಾರಿಂಜ ಬೆಟ್ಟದಲ್ಲಿ ಆಯೋಜಿಸಲಾಗಿದ್ದು ಈ ಅದ್ಭುತ ಧಾರ್ಮಿಕ ಹಾಗೂ ಪ್ರವಾಸಿ ತಾಣವು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕರಾವಳಿಯ ಶ್ರೀಮಂತ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಸಣ್ಣ ಪ್ರಯತ್ನ ಇದಾಗಿದೆ. ನಮ್ಮ ಭಾಗದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು, ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಿ, ಕ್ಷೇತ್ರದ ದಿವ್ಯತೆಯನ್ನು ಸಾರುವ ಆಕರ್ಷಕ ಕಟೆಂಟ್‌ಗಳನ್ನು ಸೃಷ್ಟಿಸಬೇಕು. ಆ ಮೂಲಕ ದೇಶ-ವಿದೇಶಗಳ ಪ್ರವಾಸಿಗರು ಈ ಪವಿತ್ರ ತಾಣಕ್ಕೆ ಭೇಟಿ ನೀಡುವಂತೆ ಪ್ರೇರೇಪಿಸಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading