Ad Widget

ವೈಭವದಿಂದ ನಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ; ಶ್ರದ್ಧಾ-ಭಕ್ತಿಯಿಂದ ಶ್ರೀ ದೇವರನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತಾದಿಗಳು

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.16 ರಿಂದ ವಾರ್ಷಿಕ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಇಂದು(ನ.26) ಪ್ರಾತಃಕಾಲ 7:29ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ ಚಂಪಾಷಷ್ಠಿ ಬ್ರಹ್ಮರಥೋತ್ಸವವು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವೈಭವದಿಂದ ನಡೆಯಿತು. ಚಿಕ್ಕ ರಥದಲ್ಲಿ ಶ್ರೀ ಉಮಾಮಹೇಶ್ವರ ದೇವರು ಹಾಗೂ ಬ್ರಹ್ಮರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಆಸೀನರಾಗಿದ್ದರು. ಸುವರ್ಣವೃಷ್ಟಿ ಹಾಗೂ ಚಿಕ್ಕ ರಥೋತ್ಸವ ನಡೆದ ಬಳಿಕ ಬ್ರಹ್ಮರಥೋತ್ಸವ ನಡೆಯಿತು. ನಂತರ ಷಷ್ಠಿ ಕಟ್ಟೆಯಲ್ಲಿ ಹಾಗೂ ಒಳಾಂಗಣ ಕಟ್ಟೆಯಲ್ಲಿ ಅವಳಿ ಕಟ್ಟೆಯಲ್ಲಿ ಪೂಜೆ ನಡೆಯಿತು. ನೆರೆದಿದ್ದ ಸಾವಿರಾರು ಭಕ್ತಾದಿಗಳು ರಥೋತ್ಸವವನ್ನು ಹಾಗೂ ರಥರೂಢರಾಗಿದ್ದ ಶ್ರೀ ಸುಬ್ರಹ್ಮಣ್ಯ ದೇವರನ್ನು ಶ್ರದ್ಧಾ-ಭಕ್ತಿಯಿಂದ ಕಣ್ತುಂಬಿಕೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ದ.ಕ ಜಿಲ್ಲಾಧಿಕಾರಿಗಳಾದ ದರ್ಶನ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ.ಅರುಣ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರು, ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಯೇಸುರಾಜ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಕಲ್ಲಾಜೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಾಕ್ಕಳ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading