Ad Widget

ನ.16ರಂದು ವಳಲಂಬೆಯಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ – ಹಿರಿಯ ಸಾಹಿತಿ ಎ.ಕೆ ಹಿಮಕರ ಸಮ್ಮೇಳನಾಧ್ಯಕ್ಷತೆ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕನ್ನಡ ಸಾಹಿತ್ಯ ಪರಿಷತ್ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನವಂಬರ್ 16ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಅಭಿಮಾನಿಗಳು ಆಮಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಅಚ್ರಪ್ಪಾಡಿ, ಸಂಘಟನಾ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಾಬು ಅಚ್ರಪ್ಪಾಡಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. “ನ.16ರಂದು ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ.ಕೆ ಬೆಳ್ಯಪ್ಪ ಗೌಡ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಎ.ಕೆ ಹಿಮಕರ ವಹಿಸಲಿದ್ದಾರೆ.
ಸಮ್ಮೇಳನ ಉದ್ಘಾಟನೆಯನ್ನು ಸಾಹಿತಿ ಹಾಗೂ ಸಂಶೋಧಕರಾದ ಕಿನ್ನಿಗೋಳಿಯ ಪೊಂಪೈ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ.ವಿ ಕರಂಗಲ್ಲು ನೆರವೇರಿಸಲಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದ ಬಳಿಕ ಹೊಸ ಕೃತಿ ಬಿಡುಗಡೆಗೊಳಿಸಲಿದ್ದಾರೆ.
ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ್ ಹಾಗೂ ಕನ್ನಡ ಧ್ವಜಾರೋಹಣವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ನೆರವೇರಿಸಿ ಆಶಯ ನುಡಿಗಳನ್ನಾಡಲಿದ್ದಾರೆ.
ಪುಸ್ತಕ ಪ್ರದರ್ಶನವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮಿತ್ರಾ ಮೂಕಮಲೆ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ಆಗಮಿಸಲಿದ್ದಾರೆ.
ಮಹೇಶ್ ಪುಚ್ಚೆಪ್ಪಾಡಿ ಬರೆದ ‘ಸಂತೆಯಲ್ಲಿ ಸಾಗುತ್ತಿರುವ ನಾವು’ ಕೃತಿ ಬಿಡುಗಡೆಗೊಳ್ಳಲಿದೆ.
ನಂತರ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ನಿವೃತ್ತ ಮುಖ್ಯಗುರುಗಳಾದ ಶಿವರಾಮ ಆಚಳ್ಳಿ ವಹಿಸಲಿದ್ದಾರೆ.
‘ಕೃಷಿ ಸಮಸ್ಯೆಗಳು ಮತ್ತು ಪರಿಹಾರಗಳು’ ವಿಷಯದ ಕುರಿತು ಕೃಷಿ ವಿಜ್ಞಾನಿ ಅವೆಂಚೂರು ಆಗ್ರೋ ಪ್ರಾಡಕ್ಟ್ ನ ಡಾ. ಬಿ.ಕೆ ವಿಶುಕುಮಾರ್ ಹಾಗೂ ‘ಧರ್ಮ ಮತ್ತು ಸಾಹಿತ್ಯ’ ವಿಷಯದ ಕುರಿತು ಬೆಂಗಳೂರಿನ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಧೀರೇನ್ ಪರಮಲೆ ಉಪನ್ಯಾಸ ನೀಡಲಿದ್ದಾರೆ.
ನಂತರ ಸ್ಥಳೀಯ ಶಾಲಾ ಮಕ್ಕಳಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. 
ಅಪರಾಹ್ನ ನಡೆಯುವ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಸ್ಥಳೀಯ ಹೋಬಳಿ ಮಟ್ಟದ ಶಾಲಾ ವಿದ್ಯಾರ್ಥಿಗಳಿಂದ ಕವಿಗೋಷ್ಠಿ ನಡೆಯಲಿದೆ. 
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಮ್.ಪಿ ಶ್ರೀನಾಥ್ ವಹಿಸಲಿದ್ದಾರೆ.
ಬೆಳ್ತಂಗಡಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಿರಿಗನ್ನಡ ಸನ್ಮಾನಕ್ಕೆ ಆಯ್ಕೆಯಾದ ಎಚ್.ಬಿ ರಾಧಾಕೃಷ್ಣ(ಕ್ರೀಡೆ) ವಸಂತ ಕುಮಾರ್ ಕಮಿಲ-ಬೆಂಗಳೂರು(ಸಮಾಜ ಸೇವೆ), ಉಮೇಶ್ ಬಿಳಿಮಲೆ(ಸಾಹಿತ್ಯ), ಶಿವರಾಮ ಕುಂಞೇಟಿ(ಸಾಹಿತ್ಯ), ವೇಣುಗೋಪಾಲ್ ದೇರಪ್ಪಜ್ಜನಮನೆ(ಕ್ರೀಡೆ & ಕಲಾ ಪೋಷಕ), ಶಿವರಾಮ ಕಲ್ಮಡ್ಕ(ರಂಗಭೂಮಿ), ಬೊಳಿಯ ಅಜಿಲ ಮತ್ತು ಚಿದಾನಂದ ಅಡ್ಡನಪಾರೆ(ಭೂತಾರಾಧನೆ), ರಚನಾ ಚಿದ್ಗಲು(ವಿದ್ಯಾರ್ಥಿ ಪ್ರತಿಭೆ, ಕಲೆ), ಉಲ್ಲಾಸ್ ಕಜ್ಜೋಡಿ ಮತ್ತು ನಿರಂಜನ ಕಡ್ಲಾರು(ಯುವ ಪ್ರತಿಭೆ) ಇವರನ್ನು ಸಹಕಾರ ರತ್ನ ನಿತ್ಯಾನಂದ ಮಂಡೋಡಿ, ಸಾಮಾಜಿಕ ಮುಖಂಡ ಚಂದ್ರಶೇಖರ ತಳೂರು ಸನ್ಮಾನಿಸಲಿದ್ದಾರೆ. ಹಾಗೂ ಸಮಾಜಸೇವಾ ತಂಡಗಳಾದ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಯುವತೇಜಸ್ಸು(ರಿ.) ಪಂಜ, ಪುಸ್ತಕದ ಗೂಡು ಹಾಲೆಮಜಲು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು ಹಾಗೂ ವಿಪತ್ತು ನಿರ್ವಹಣಾ ತಂಡ ಗುತ್ತಿಗಾರು ಇವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ” ಎಂದರು.
ವೆಂಕಟ್ ದಂಬೆಕೋಡಿ ಮಾತನಾಡಿ “ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯುವುದು ಕಡಿಮೆ, ಈ ಹಿಂದೆ ಪಂಜದಲ್ಲಿ ನಡೆದಿತ್ತು. ಮತ್ತೆ ಈ ಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಬೇಕು ಎಂಬುದು ಅಧ್ಯಕ್ಷರ ಕನಸಾಗಿದ್ದು ಆದಕ್ಕೆ ನಾವೆಲ್ಲಾ ಕೈ ಜೋಡಿಸಿದ್ದೇವೆ. ಸಾಹಿತ್ಯ ಆಸಕ್ತರಿಗೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಲಿದೆ. ಸಾಹಿತ್ಯ ಬೆಳವಣಿಗೆಯ ದೃಷ್ಟಿಯಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಭಾಷೆಯ ಉಳಿವಿಗಾಗಿ ಎಲ್ಲರನ್ನು ತೊಡಗಿಸಿಕೊಂಡು ಯಶಸ್ವಿ ಕಾರ್ಯಕ್ರಮ ಮಾಡುತ್ತೇವೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ. ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ, ಸಂಘಟನಾ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೇಶವ ಹೆಚ್.ಬಿ ಹೊಸೊಳಿಕೆ, ಸಂಚಾಲಕರಾದ ಯೋಗೀಶ್ ಹೊಸೊಳಿಕೆ, ಪಂಜ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ವೆಂಕಪ್ಪ ಕೇನಾಜೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ಕ.ಸಾ.ಪ. ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ತುಂಬತ್ತಾಜೆ, ಸಂಘಟನಾ ಸಮಿತಿ ಕೋಶಾಧಿಕಾರಿ ಪ್ರಭಾಕರ ಕಿರಿಭಾಗ  ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading