
ಸಹಕಾರಿ ಸಂಘಗಳು ಗ್ರಾಮೀಣ ಜನರ ಬೆನ್ನೆಲುಬು ಆಗಿ ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅವರು ಸುಳ್ಯದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾಯಿತ ಸಹಕಾರಿಗಳ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರಿಗಳು ಸಮಾಜ ಸೇವೆಯ ಜತೆಗೆ ಸಂಘಟನೆಗೂ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು. ರಾಜ್ಯ ಸರಕಾರವನ್ನು ಪ್ರಶ್ನಿಸಿದ ಅವರು ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ದ.ಕ. ಅಭಿವೃದ್ಧಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರು ಉತ್ತರಿಸಬೇಕಿದೆ. ಹಗರಣಗಳಲ್ಲಿ ಸಿಲುಕಿರುವ ಸರಕಾರದಿಂದ ಅಭಿವೃದ್ಧಿ ಶೂನ್ಯವಾಗಿದೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದೂಗಳ ಮತ ಪಡೆದು ಹಿಂದುಗಳಿಗೆ ವಂಚಿಸುತ್ತಿದೆ. ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೂ ಭೇಟಿ ನೀಡದೇ, ಕೊಲೆ ಪ್ರಕರಣವನ್ನು ಎನ್.ಐ.ಎ. ತನಿಖೆಗೆ ವಹಿಸದೇ ಅನ್ಯಾಯ ಮಾಡಿದೆ.
ಅಪರೇಶನ್ ಸಿಂಧೂರ್ ಕಾರ್ಯಾಚರಣೆಯಿಂದ ನೂರಾರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಆದರೇ ಕಾಂಗ್ರೇಸ್ ನವರು ಪ್ರಧಾನಿ ಮೋದಿಯವರನ್ನು ಟೀಕಿಸಲು ಆರಂಭಿಸಿದ್ದಾರೆ. ಆಪರೇಶನ್ ಸಿಂಧೂರ್ ವಿಜಯಕ್ಕೆ ಕಾರಣರಾದ ಸೈನಿಕರಿಗೆ ಬೆಂಬಲವಾಗಿ ರಾಜ್ಯಾದ್ಯಂತ ತಿರಂಗ ಯಾತ್ರೆ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೇವೆಯನ್ನು ಒದಗಿಸಲು ಸಹಕಾರಿಗಳು ಶ್ರಮಿಸಬೇಕಿದೆ. ಸಹಕಾರಿ ಕ್ಷೇತ್ರದ ಮೂಲಕ ಜನರ ಅಭ್ಯುದಯ ಮಾಡಲು ಕೇಂದ್ರ ಸರಕಾರ ಹೆಜ್ಜೆ ಇರಿಸಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಅಂಗಾರ, ಶಾಸಕರಾದ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಜಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕಿಶೋರ್ ಕುಮಾರ್ ಕೊಟ್ಯಾಡಿ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ , ಬಿಜೆಪಿ ಮುಖಂಡರುಗಳಾದ ರವೀಂದ್ರ ಶೆಟ್ಟಿ ಉಳಿದೊಟ್ಟು , ಯತೀಶ್ ಆರ್ವಾರ, ಪ್ರೇಮಾನಂದ ಶೆಟ್ಟಿ, ನಂದನ್ ಮಲ್ಯ, ವಿನಯ ಮುಳುಗಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.