
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ನಡೆದ ಚೆಸ್ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಟ್ರಸ್ಟ್ ವತಿಯಿಂದ ನಡೆಯುವ ಕರಾಟೆ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ಗುತ್ತಿಗಾರಿನ ಪ.ವರ್ಗದ ಸಭಾಭವನದಲ್ಲಿ ನಡೆಯಿತು. ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ, ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಧನಪತಿ, ಶ್ರೀಮತಿ ಪ್ರೀತಿ ನಿಶ್ಚಿತ್ ದೇವಶ್ಯ ಇವರು ದೀಪ ಬೆಳಗಿಸುವ ಮೂಲಕ ಕರಾಟೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ದೇಶದ ಸೈನ್ಯದ ಯಶಸ್ಸಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕರಾಟೆ ತರಬೇತಿ ಕಾರ್ಯಾಗಾರದ ಉದ್ಘಾಟನೆಯೊಂದಿಗೆ ಟ್ರಸ್ಟ್ ವತಿಯಿಂದ ಈ ಹಿಂದೆ ನಡೆದ ಚೆಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವೂ ನಡೆದು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
“ಮುಂದೆ ಗ್ರಾಮೀಣ ಪ್ರದೇಶದ ಮಕ್ಕಳ ಸಧೃಡತೆಯ ಧ್ಯೇಯದೊಂದಿಗೆ ಮೇ.20 ರವರೆಗೆ ಕರಾಟೆ ತರಬೇತಿ ಕಾರ್ಯಾಗಾರ ನಡೆಯಲಿದೆ” ಎಂದು ಟ್ರಸ್ಟ್ ನ ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ, ಮೋಹನ್ ಮುಕ್ಕೂರು, ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಸುಕೇಶ್ ಚಾರ್ಮತ, ಶ್ರೀಮತಿ ಅಭಿಲಾಷಾ ಶಿವಪ್ರಕಾಶ್, ಕರಾಟೆ ಶಿಕ್ಷಕರಾದ ನಾರಾಯಣ ಮಳಿ, ಚೆಸ್ ಶಿಕ್ಷಕರಾದ ರಮೇಶ್ ಕರಂಗಲಡ್ಕ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)