
ಸುಳ್ಯ:ಸುಳ್ಳು ಮಾಹಿತಿಗಳು, ವೈಭವೀಕರಿಸಿದ ಸುದ್ದಿಗಳ ಅತಿಪ್ರಸರಣದಿಂದ ಗೊಂದಲ, ಆತಂಕ ಸೃಷ್ಠಿಯಾಗುತ್ತಿರುವ ಇಂದಿನ ದಿನಗಳಲ್ಲಿ ಸುದ್ದಿಗಳನ್ನು ಸತ್ಯ ಮತ್ತು ನಿಸ್ಪಕ್ಷಪಾತವಾಗಿ ಬಿತ್ತರಿಸುವ ಮೂಲಕ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸತ್ಯವನ್ನೇ ತಿಳಿಸುವ ಮೂಲಕ ಜನರನ್ನು ಸುಶಿಕ್ಷಿತರನ್ನಾಗಿಸಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅಭಿಪ್ರಾಯಪಟ್ಟಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸತ್ಯಕ್ಕೆ ದೂರವಾದ ಹಲವು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವೊಂದು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವುದು ಕಂಡು ಬರುತ್ತಿದೆ. ಇದರಿಂದ ಜನರಲ್ಲಿ ಗೊಂದಲ, ಆತಂಕಗಳು ಉಂಟಾಗುತ್ತದೆ. ಜನರು ಸತ್ಯವನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳ ಭವಿಷ್ಯದ ದೃಷ್ಠಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ, ಅದುದರಿಂದ ಮಾಧ್ಯಮಗಳು ಸತ್ಯದ ಕನ್ನಡಿಯಾಗಬೇಕು ಎಂದು ಅವರು ಹೇಳಿದರು.
ಪ್ರೆಸ್ ಕ್ಲಬ್ ಸದಸ್ಯರ ಐಡಿ ಕಾರ್ಡ್ ಅಕ್ಷಯ್ ಕೆ.ಸಿ. ಬಿಡುಗಡೆ ಮಾಡಿದರು.
ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಪದಗ್ರಹಣ ನೆರವೇರಿಸಿದರು. ಪ್ರೆಸ್ ಕ್ಲಬ್‌ನ ನೂತನ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ನೇತೃತ್ವದ ನೂತನ ಪದಾಧಿಕಾರಿಗಖ ತಂಡ ಅಧಿಕಾರ ವಹಿಸಿಕೊಂಡರು.
ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಉದ್ಯಮಿಗಳಾದ ಶಶಿಕಲಾ ಶುಭಕರ ರಾವ್ ಕುಂಭಕ್ಕೋಡು, ಕೋಟಕ್ಕಲ್ ಆಯುರ್‌ವೈದ್ಯ ಶಾಲಾದ ಪ್ರಶಾಂತ್ ಕುಮಾರ್ ಕೋಟಕ್ಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರೆಸ್ ಕ್ಲಬ್‌ನ ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಉಪಸ್ಥಿತರಿದ್ದರು. ಬಂಟ್ವಾಳಕ್ಕೆ ವರ್ಗಾವಣೆಗೊಂಡ ಸೈಂಟ್ ಬ್ರಿಜಿಡ್ ಚರ್ಚ್‌ನ ಧರ್ಮಗುರುಗಳಾದ ಫಾ.ವಿಕ್ಟರ್ ಡಿಸೋಜ ಅವರನ್ನು ಗೌರವಿಸಲಾಯಿತು.
ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರೆಸ್ ಕ್ಲಬ್ ಸದಸ್ಯರ ಮಕ್ಕಳಾದ ಶಫೀಕ್ ಜಯನಗರ, ಸಾನ್ವಿ ಅಡ್ಪಂಗಾಯ, ಶೌರ್ಯ ಪೆರ್ಲಂಪಾಡಿ, ಸಮರ್ಥ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸೃಜನಾದಿತ್ಯಶೀಲ, ಚಿರಸ್ವಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಕೃತಸ್ವರ ದೀಪ್ತ ಅವರನ್ನು ಗೌರವಿಸಲಾಯಿತು. ಪ್ರೆಸ್ ಕ್ಲಬ್ ಕೋಶಾಧಿಕಾರಿ ಈಶ್ವರ ವಾರಣಾಶಿ ಸ್ವಾಗತಿಸಿದರು. ನಿರ್ದೇಶಕ ಗಂಗಾಧರ ಕಲ್ಲಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿದರು. ನಿರ್ದೇಶಕ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.