
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಸಮಿತಿಯ ಸದಸ್ಯ ಕಾರ್ಯದರ್ಶಿ ರಾಜಣ್ಣ ಕಾರ್ಯಕಲಾಪ ನಡೆಸಿಕೊಟ್ಟರು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿಯ ಪ್ರಗತಿಯಬಗ್ಗೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ತಾಲೂಕಿನ ಕೆಲವು ಪಲಾನುಭವಿಗಳ ಆಧಾರ್ ಬಯೋಮೆಟ್ರಿಕ್ ಮತ್ತು ಬ್ಯಾಂಕ್ ಖಾತೆಯ ಸಮಸ್ಯೆಯ ಬಗ್ಗೆ ಕೆಲವು ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ಕೊಡಿಯಾಲಬೈಲು – ನೀರಬಿದಿರೆ -ದುಗ್ಗಲಡ್ಕ ಮಾರ್ಗವಾಗಿ ಕೆ. ಎಸ್. ಆರ್. ಟಿ. ಸಿ ಬಸ್ಸು ಸಂಚಾರ ಪ್ರಾರಂಭಿಸುವಂತೆ ಕಳೆದ ಸಭೆಯಲ್ಲಿ ಚರ್ಚಿಸಿರುವ ಕುರಿತು ಸದಸ್ಯ ಭವಾನಿಶಂಕರ್ ಕಲ್ಮಡ್ಕ ಸಭೆಯಲ್ಲಿ ಪ್ರಸ್ತಾಪಿಸಿದರು. ಶಾಲಾ ಕಾಲೇಜು ಆರಂಭದ ಹೊತ್ತಿಗೆ ಬಸ್ಸು ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಯಿಂದ ಹೊರಗುಳಿದವರ ಮತ್ತು ಯೋಜನಯಿಂದ ವಂಚಿತರಾಗಿರುವವರ ಪಟ್ಟಿಯನ್ನು ತಯಾರಿಸುವಂತೆ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಬರಡ್ಕ ಮಿತ್ತೂರಿನ ಪಡಿತರ ಕೇಂದ್ರದಲ್ಲಿ ಈಗ ಕೇವಲ 3 ದಿನ ತೆರಿದಿರುವ ಬಗ್ಗೆ ಭವಾನಿಶಂಕರ್ ಕಲ್ಮಡ್ಕ ಪ್ರಸ್ತಾಪಿಸಿ ಇನ್ನು ಮುಂದೆ 10 ದಿನಗಳ ಕಾಲ ಪಡಿತರ ವಿತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಸದಸ್ಯರಾದ ಅಬ್ಬಾಸ್ ಅಡ್ಪಂಗಾಯ, ಶೇಖರ್ ಮನಿಯಾಣಿ ಮಂಡೆಕೋಲು, ಲತೀಫ್ ಅಡ್ಕಾರ್, ಸೋಮಶೇಖರ್ ಕೇವಳ, ಧನುಷ್ ಕುಕ್ಕೇಟಿ, ರಾಜು ನೆಲ್ಲಿಕುಮೇರಿ, ಇಬ್ರಾಹಿಂ ಶಿಲ್ಪಾ, ಶ್ರೀಮತಿ ಭವಾನಿ ಬೊಮ್ಮಟ್ಟಿ, ಶ್ರೀಮತಿ ಕಾಂತಿ ಸಂಪಾಜೆ ಭಾಗವಹಿಸಿದ್ದರು. ಗ್ಯಾರಂಟಿ ಯೋಜನೆಗೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.